ಕನ್ನಡಪ್ರಭ ವಾರ್ತೆ ಪುತ್ತೂರು
ಹಲವು ಅಪಘಾತಗಳಿಗೆ ಕಾರಣವಾಗಿದ್ದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿನ ಅಪಾಯಕಾರಿ ತಿರುವುಗಳಿಂದ ಕೂಡಿದ್ದ ರಸ್ತೆಯನ್ನು ತೆರವುಗೊಳಿಸಿ ಇದೀಗ ನೇರವಾಗಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಅಪಘಾತದ ಸ್ಥಳವೆಂದೇ ಪರಿಗಣಿತವಾಗಿದ್ದ, ಹಲವಾರು ಜೀವಹಾನಿಗೆ ಕಾರಣವಾಗಿದ್ದ ಈ ತಿರುವಿನಿಂದ ವಾಹನ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಕುಂಬ್ರ ಪೇಟೆಯ ಪಕ್ಕದಲ್ಲಿರುವ ಈ ರಸ್ತೆಯು ಹಿಂದೆ ಭಾರಿ ತಿರುವಿನಿಂದ ಹಾಗೂ ಇಳಿಜಾರಿನಿಂದ ಕೂಡಿತ್ತು. ರಸ್ತೆಯ ಒಂದು ಭಾಗದಲ್ಲಿ ಆಳವಾದ ತೋಡು ಇದ್ದರೆ, ಇನ್ನೊಂದು ಭಾಗದಲ್ಲಿ ಎತ್ತರವಾದ ಗುಡ್ಡವಿದೆ. ಅಲ್ಲದೆ ಇಲ್ಲಿ ಹಳೆಯ ಸೇತುವೆಯೂ ಇದ್ದು, ವಾಹನ ಪ್ರಯಾಣಿಕರು ಸ್ವಲ್ಪ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿಯಾಗಿತ್ತು.ಮಾಣಿ-ಮೈಸೂರು ರಸ್ತೆ ಅಗಲೀಕರಣದ ಸಮಯದಲ್ಲಿ ಇಲ್ಲಿದ್ದ ಹಳೆಯ ಸೇತುವೆಯ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇದೀಗ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇಲ್ಲಿರುವ ರಸ್ತೆ ತಿರುವು ತೆರವು ಮಾಡಿ ಹೆದ್ದಾರಿ ನೇರಗೊಳಿಸುವ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಜೊತೆಗೆ ಸೇತುವೆಯ ಒಂದು ಭಾಗದಲ್ಲಿನ ತಿರುವು ಮತ್ತು ಇಳಿಜಾರು ರಸ್ತೆ ತೆರವುಗೊಳಿಸಿದ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಪಕ್ಕದಲ್ಲಿರುವ ಎತ್ತರದ ಗುಡ್ಡವನ್ನು ತಗ್ಗಿಸುವ ಕೆಲಸ ಭರದಿಂದ ಸಾಗುತ್ತಿದೆ. ಬೃಹತ್ ಗಾತ್ರದ ಹಿಟಾಚಿಗಳನ್ನು ಬಳಸಿ ಕಳೆದ ಕೆಲವು ದಿನಗಳಿಂದ ಗುಡ್ಡ ಅಗೆದು ಸಮತಟ್ಟುಗೊಳಿಸಲಾಗುತ್ತಿದೆ.* ಅಪಘಾತದ ಸ್ಥಳ:ಅಪಾಯಕಾರಿ ಅಪಘಾತದ ತಿರುವು ಎಂದೇ ಸೇತುವೆ ರಸ್ತೆಯು ಹೆಸರು ಪಡೆದಿತ್ತು. ಇಲ್ಲಿನ ಸೇತುವೆಗೆ ಗುದ್ದಿ ಹಲವು ವಾಹನಗಳು ಉರುಳಿ ಬಿದ್ದಿತ್ತು. ಸುಮಾರು ೫೦ಕ್ಕೂ ಅಧಿಕ ಸಣ್ಣ ದೊಡ್ಡ ಅಪಘಾತಗಳು ಇಲ್ಲಿ ಸಂಭವಿಸಿತ್ತು. ಏಳೆಂಟು ಜೀವಹಾನಿಯಾಗಿತ್ತು. ಬಳಿಕ ಇಲ್ಲಿನ ಎರಡೂ ಬದಿಗಳಲ್ಲಿ ಉಬ್ಬು ಅಳವಡಿಸಿದ ಬಳಿಕ ಹಾಗೂ ಹೆದ್ದಾರಿ ಅಗಲೀಕರಣದಿಂದಾಗಿ ಸ್ಪಲ್ಪ ಮಟ್ಟಿಗೆ ಅಪಘಾತದ ಸಂಖ್ಯೆ ಕಡಿಮೆಯಾಗಿತ್ತು.ಇದೀಗ ತಿರುವು ರಸ್ತೆಯನ್ನೇ ಬದಲುಗೊಳಿಸಿ ನೇರ ರಸ್ತೆ ಮಾಡಲಾಗುತ್ತಿದೆ. ಅಲ್ಲದೆ ಎತ್ತರವನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಪ್ರಯಾಣವು ಅಪಾಯಕಾರಿಯಲ್ಲದ ಸುಖ ಪ್ರಯಾಣವಾಗಲಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯ.* ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು:ಹಳೆಯ ತಿರುವು ರಸ್ತೆಯ ಪಕ್ಕದಲ್ಲಿ ಧರೆಯನ್ನು ತಗ್ಗುಗೊಳಿಸಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪಕ್ಕದಲ್ಲಿ ಹಾದು ಹೋಗಿರುವ ಪಂಚಾಯಿತಿ ರಸ್ತೆಯ ಕಾಂಕ್ರೀಟ್‌ನಲ್ಲಿ ಬಿರುಕು ಮೂಡಿದೆ. ಹೆದ್ದಾರಿ ಪಕ್ಕದಲ್ಲಿ ಸುಮಾರು ೫೦ ಅಡಿಗಿಂತಲೂ ಅಗಲಕ್ಕೆ ಮಣ್ಣು ಅಗೆದು ಬೇರೆಡೆ ಸಾಗಿಸಲಾಗುತ್ತಿದೆ. ರಸ್ತೆಯ ಇಳಿಜಾರನ್ನು ತಗ್ಗಿಸುತ್ತಿರುವ ಕಾರಣ ೮೦ ಅಡಿಗಿಂತಲೂ ಎತ್ತರದ ಧರೆ ನಿರ್ಮಾಣಗೊಂಡಿದೆ. ಇಲ್ಲಿನ ಮಣ್ಣು ಮೃದುವಾಗಿರುವ ಕಾರಣ ಧರೆ ಒಂದೆರಡು ಮಳೆಗೆ ಕುಸಿಯುವ ಭೀತಿ ಎದುರಾಗಿದೆ.* ಮನೆಗೆ ಅಪಾಯ ತಪ್ಪಿಸಲು ತಡೆಗೋಡೆ:ಇಲ್ಲಿನ ರಸ್ತೆಯನ್ನು ನೇರಗೊಳಿಸಿ ತಗ್ಗಿಸುವ ಸಂದರ್ಭದಲ್ಲಿ ಈ ಭಾಗದಲ್ಲಿ ಸುಮಾರು ೮೦ ಅಡಿಗಿಂತಲೂ ಎತ್ತರದ ಧರೆ ನಿರ್ಮಾಣಗೊಂಡಿತ್ತು. ಇದರಿಂದಾಗಿ ಪಕ್ಕದಲ್ಲಿರುವ ಗುಡ್ಡದ ಮೇಲಿರುವ ಹಂಚಿನ ಮನೆಯೊಂದು ಅಪಾಯದಲ್ಲಿ ಸಿಲುಕಿಕೊಂಡಿದೆ. ಧರೆಯ ಅಂಚಿನಲ್ಲಿಯೇ ಈ ಮನೆ ಮತ್ತು ಮನೆಯ ಮುಂಭಾಗದಲ್ಲಿ ಕುಡಿಯುವ ನೀರಿನ ಬಾವಿಯಿದೆ. ಮಳೆಗಾಲದಲ್ಲಿ ಧರೆ ಕುಸಿತವಾದಲ್ಲಿ ಮನೆಗೆ ಭಾರಿ ಹಾನಿಯಾಗುವ ಸಂಭವವಿದೆ. ಕುಸಿಯುವ ಅಪಾಯವನ್ನು ಅರಿತು ಇಲಾಖೆ ವತಿಯಿಂದ ಮನೆಯ ಮುಂಭಾಗದಲ್ಲಿ ರಸ್ತೆ ಬದಿಗೆ ಎತ್ತರದ ತಡೆಗೋಡೆ ನಿರ್ಮಿಸಬೇಕಾಗಿದೆ.