ರಸ್ತೆಯ ಇಕ್ಕೆಲ ‘ಕಸ ತೋರಣ’!

KannadaprabhaNewsNetwork |  
Published : Apr 30, 2024, 02:14 AM IST
ಎಲ್ಲೆಡೆಯೂ ರಸ್ತೆಯ ಇಕ್ಕೆಲಗಳಲ್ಲಿ ಕಸಗಳ ತೋರಣ  | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿಗಳು, ನಗರ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆಗಳು ಕೂಡ ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡು ಅನುದಾನಗಳನ್ನು ಹೆಚ್ಚು ಹೆಚ್ಚು ವ್ಯಯ ಮಾಡುತ್ತಿದೆ. ಹೀಗಿದ್ದರೂ ಕೂಡ ಸ್ವಚ್ಛತೆಯ ವಿಚಾರದಲ್ಲಿ ಸ್ಥಳೀಯ ಆಡಳಿತಗಳು ಸೋತಿದೆ ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬರುತ್ತಿರುವ ರಸ್ತೆಗಳ ಇಕ್ಕೆಲಗಳ ಕಸಗಳೇ ಸಾಕ್ಷಿ ಎಂದರೆ ತಪ್ಪಲ್ಲ.

ಮೌನೇಶ್‌ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸ್ವಚ್ಛತೆ ಎಂದರೆ ಯಾಕೆ ಇಷ್ಟೊಂದು ಅಲರ್ಜಿ ಎಂದೇ ತಿಳಿಯುತ್ತಿಲ್ಲ..! ಪ್ರಸ್ತುತ ಸನ್ನಿವೇಶದಲ್ಲಿ ದ.ಕ‌. ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಸಹಿತ ಎಲ್ಲ ರಸ್ತೆಯ ಇಕ್ಕೆಲಗಳಲ್ಲಿಯೂ ‘ಕಸಗಳ ತೋರಣ’ವೇ ಕಂಡು ಬರುತ್ತಿದ್ದು, ಪ್ರಜ್ಞಾವಂತ ಸಮೂಹ ತಲೆತಗ್ಗಿಸುವಂತಾಗಿದೆ. ‘ಸ್ವಚ್ಛತೆ, ಸ್ವಚ್ಛ ಭಾರತ್, ಪ್ಲಾಸ್ಟಿಕ್ ಮುಕ್ತ ಸಮಾಜ’ ಹೀಗೆ ಹತ್ತು ಹಲವು ಹೆಸರಿನಲ್ಲಿ ಗ್ರಾಮೀಣ ಪ್ರದೇಶದಿಂದ ತೊಡಗಿ ನಗರ ಪ್ರದೇಶದ ವರೆಗೂ ಹಲವು ಜನಜಾಗೃತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.

ಇಷ್ಟು ಮಾತ್ರವಲ್ಲದೆ ಗ್ರಾಮ ಪಂಚಾಯಿತಿಗಳು, ನಗರ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆಗಳು ಕೂಡ ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡು ಅನುದಾನಗಳನ್ನು ಹೆಚ್ಚು ಹೆಚ್ಚು ವ್ಯಯ ಮಾಡುತ್ತಿದೆ. ಹೀಗಿದ್ದರೂ ಕೂಡ ಸ್ವಚ್ಛತೆಯ ವಿಚಾರದಲ್ಲಿ ಸ್ಥಳೀಯ ಆಡಳಿತಗಳು ಸೋತಿದೆ ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬರುತ್ತಿರುವ ರಸ್ತೆಗಳ ಇಕ್ಕೆಲಗಳ ಕಸಗಳೇ ಸಾಕ್ಷಿ ಎಂದರೆ ತಪ್ಪಲ್ಲ.

ಹಾಗೆಂದ ಮಾತ್ರಕ್ಕೆ ಇದು ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಎಂದು ಹೇಳುವಂತಿಲ್ಲ. ಇಲ್ಲಿ ಎಡವಿರುವುದು ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಕೆಟ್ಟ ಮನಃಸ್ಥಿತಿ. ವಾಹನಗಳಲ್ಲಿ ತೆರಳುವ ವೇಳೆ ರಸ್ತೆ ಪಕ್ಕ, ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾವ ರಸ್ತೆಯ ಇಕ್ಕೆಲಗಳಲ್ಲಿ ಗಮನಿಸಿದರೂ ಕೂಡ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳೇ ಕಾಣುತ್ತಿದೆ.

ಕೆಲವೆಡೆಗಳಲ್ಲಿ ಕಸ ಹಾಕಬೇಡಿ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಫಲಕ ಅಳವಡಿಸಿದ್ದರೂ, ಆ ಫಲಕದ ತಳ ಭಾಗದಲ್ಲಿ ಕಸ ಎಸೆಯುವಂತಹ ಕೃತ್ಯ ನಡೆಸುತ್ತಿದ್ದಾರೆ.

* ಜನರ ಮನಸ್ಥಿತಿ ಬದಲಾಗಲಿ

ಇಂತಹ ಸನ್ನಿವೇಶದಲ್ಲಿ ಇದರ ಮೇಲೆ ನಿಯಂತ್ರಣ ಸೇರಬೇಕೆನ್ನುವ ನಿಟ್ಟಿನಲ್ಲಿ ಹಲವಾರು ಸಂಘಟನೆಗಳು, ವ್ಯಕ್ತಿಗಳು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. ಜಿಲ್ಲಾಡಳಿತವೂ ಕೂಡ ಈ ಕುರಿತಾಗಿ ಗಮನಹರಿಸಲು ಸ್ಥಳೀಯಾಡಳಿತಗಳಿಗೆ ನಿರ್ದೇಶನ ನೀಡಿದ್ದರೂ, ಜನಸಾಮಾನ್ಯರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಕಾಣದ ಹೊರತು ಈ ಬಗ್ಗೆ ಜಾಗೃತಿ ನಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮುಡಿಪು ಜನಶಿಕ್ಷಣ ಟ್ರಸ್ಟ್‌ ನಿರ್ದೇಶಕ ಶೀನ ಶೆಟ್ಟಿ.

ನಮ್ಮ ಜಿಲ್ಲೆ ಸಾಕ್ಷರತಾ ಜಿಲ್ಲೆ, ಹೆಚ್ಚು ವಿದ್ಯಾವಂತರು, ಹೆಚ್ಚು ಪ್ರಜ್ಞಾವಂತರು ಎಂಬ ಹಿರಿಮೆಯನ್ನು ಪಡೆದುಕೊಂಡಿದೆ. ಆದರೆ ಜಿಲ್ಲೆಯ ಪ್ರಸ್ತುತ ಸನ್ನಿವೇಶವನ್ನು ಗಮನಿಸುವಾಗ ಪ್ರಜ್ಞಾವಂತರು ತಲೆತಗ್ಗಿಸುವಂತಾಗಿದೆ.

ಸ್ಥಳೀಯಾಡಳಿತಗಳಲ್ಲಿ ಸ್ವಚ್ಛತೆಗೆ ನಿಯೋಜನೆಗೊಂಡ ಕಾರ್ಮಿಕರು ಹಲವು ಬಾರಿ ಈ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸುತ್ತಾರೆಯಾದರೂ ಮತ್ತೆ ಮತ್ತೆ ಕಸ ಎಸೆಯುವ ಮಂದಿಯಿಂದಾಗಿ ಸಂಪೂರ್ಣ ಸ್ವಚ್ಛತೆ ಅಸಾಧ್ಯ ಎಂಬಂತಾಗಿದೆ.* ಏನಾಗಬೇಕಿದೆ...?ಜನಶಿಕ್ಷಣ ಟ್ರಸ್ಟ್ ಈ ಬಾರಿ ಮತದಾರರ ಜಾಗೃತಿಯ ಜೊತೆಯಲ್ಲಿ ಸ್ವಚ್ಛತೆಯ ಜಾಗೃತಿಯ ಕಡೆಗೂ ಕೂಡ ಗಮನಹರಿಸಬೇಕೆಂಬ ಮನವಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ , ಸ್ವೀಪ್ ಸಮಿತಿ ಮತದಾರರ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸ್ವಚ್ಛತೆಯ ಕಾರ್ಯಕ್ರಮವನ್ನು ಕೂಡ ಆಯೋಜಿಸಿತ್ತು. ಆದರೆ ಅದು ಕೇವಲ ಕಾರ್ಯಕ್ರಮವಾಗಿ ಮುಗಿಯಿತೇ ಹೊರತು ಜನಸಾಮಾನ್ಯರಲ್ಲಿ ನಿಜಾರ್ಥದ ಬದಲಾವಣೆಯನ್ನು ತಂದಿಲ್ಲ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಜಾಗೃತಿಯನ್ನು ಮೂಡಿಸುವ ಕಾರ್ಯ ನಡೆಸಬೇಕಾಗಿದೆ.* ರಾಜಕೀಯ ಪಕ್ಷಗಳ ಸಹಕಾರ ಅಗತ್ಯಇತ್ತೀಚೆಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಹೆಚ್ಚು ಹೆಚ್ಚು ಶ್ರಮವನ್ನು ಹಾಕಿರುವುದನ್ನು ಗಮನಿಸಿದ್ದೇವೆ. ಆದರೆ ಈಗ ಎಲ್ಲ ಪಕ್ಷಗಳ ಕಾರ್ಯಕರ್ತರು ಪಕ್ಷ ಭೇದ ಮರೆತು ಒಂದು ದಿನವನ್ನು ಸ್ವಚ್ಛತೆಗೆಂದು ಮೀಸಲಿಟ್ಟು ಶ್ರಮಿಸಿದರೆ, ಖಂಡಿತವಾಗಿಯೂ ಕೂಡ ಜಿಲ್ಲೆಯ ಪರಿಸರ ಒಂದೇ ದಿನದಲ್ಲಿ ಶುದ್ಧವಾಗಿರಲು ಸಾಧ್ಯವಿದೆ. ಕಸ ಎಸೆಯುವ ದುಷ್ಟ ಮನಸ್ಸಿನವರನ್ನು ಪತ್ತೆ ಹಚ್ಚುವಲ್ಲಿ ಕೂಡ ಗ್ರಾಮಸ್ಥರ ತಂಡಗಳು ಜಾಗೃತವಾಗಬೇಕಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳಿಗೆ ಕಸವನ್ನು ನೀಡುವುದರ ಮೂಲಕ ತ್ಯಾಜ್ಯ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ.

----------

ಸ್ವಚ್ಛತೆಯ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ. ಇದು ಕೇವಲ ಆಡಳಿತ ವ್ಯವಸ್ಥೆಯ ಹೊಣೆಯಲ್ಲ, ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯು ಹೌದು.

। ಶೀನ ಶೆಟ್ಟಿ, ನಿರ್ದೇಶಕರು ಜನಶಿಕ್ಷಣ ಟ್ರಸ್ಟ್ ಮುಡಿಪು

-------------ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆಗಳಿಲ್ಲ, ತ್ಯಾಜ್ಯವಿಲೇವಾರಿ ಕುರಿತು ಹೆಚ್ಚಿನ ಜಾಗೃತಿ ಆಗಬೇಕಿದೆ.

। ಸತ್ಯದೇವಿ, ನಾಗರಿಕರು ಕಲ್ಲಡ್ಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ