ಮೂಲ್ಕಿ: ಬಜಪೆ ಪಟ್ಟಣ ಪಂಚಾಯಿತಿಯ 19 ವಾರ್ಡ್‌ಗಳಿಗೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 18 ವಾರ್ಡುಗಳಿಗೆ 21ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಡಿ.9 ಆಗಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಡಿ.12 ಆಗಿದ್ದು 21 ರಂದು ಚುನಾವಣೆ ನಡೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ದೃಷ್ಟಿಯಿಂದ ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ.19ರ ಸಂಜೆ 5 ಗಂಟೆಯಿಂದ 21 ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ. 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ/ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.
ಬಿಜೆಪಿಯಿಂದ ಕೂಡ ಕಾರ್ಯಕರ್ತರ ಸಭೆ ನಡೆದಿದೆ. ಎಸ್‌ಡಿಪಿಐ ಬಜಪೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಹಾಗೂ ಕಿನ್ನಿಗೋಳಿಯಲ್ಲಿ ಕೆಲವು ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆಗಿ ರೂಪುಗೊಂಡಿದ್ದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯನ್ನು ತನ್ನ ವಶಕ್ಕೆ ಪಡೆಯಲು ಕಾಂಗ್ರೆಸ್ ನಾಯಕ ಮಿಥುನ್ ರೈ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿದೆ.
ಈಗಾಗಲೇ ಮೆನ್ನಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ ಸೇರಿದಂತೆ ಬಿಜೆಪಿ,ಜೆಡಿಎಸ್ ನ ಹಲವಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಯುವಕರಿಗೆ ಅವಕಾಶ ನೀಡಿ ವಾರ್ಡ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ.ಬಿಜೆಪಿಯಿಂದ ಪ್ರತಿ ವಾರ್ಡ್ ಮಟ್ಟದಲ್ಲಿ ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಅಂತಿಮಗೊಳಿಸುವ ಕಾರ್ಯ ನಡೆದಿದೆ.