ಮಂಡ್ಯದಲ್ಲಿ ಬಜರಂಗದಳ ಶೋಭಾಯಾತ್ರೆ ಶಾಂತಿಯುತ

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ಶ್ರೀರಾಮ, ಶ್ರೀಉಗ್ರ ನರಸಿಂಹ, ಶ್ರೀ ಹನುಮ ಟ್ಯಾಬ್ಲೋಗಳು, ಪೂಜಾ ಕುಣಿತ ಹಾಗೂ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ, ಶ್ರೀರಾಮಾಂಜನೇಯ ಸಮಿತಿ ವತಿಯಿಂದ ಸಕ್ಕರೆ ನಗರ ಮಂಡ್ಯದಲ್ಲಿ ಶನಿವಾರ ನಡೆದ ಶೋಭಾಯಾತ್ರೆ ಯಶಸ್ವಿ ಹಾಗೂ ಶಾಂತಿಯುತವಾಗಿ ನಡೆಯಿತು.ನಗರದ ಅದಿದೇವತೆ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಜಗನ್ನಾಥ್‌ಶಾಸ್ತ್ರಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.ಶ್ರೀ ಕಾಳಿಕಾಂಬ ದೇವಾಲಯದ ಆವರಣದಿಂದ ಹೊರಟ ಶೋಭಾಯಾತ್ರೆ ಪೇಟೆ ಬೀದಿ, ಕಾಮನ ಸರ್ಕಲ್, ಹೊಳಲು ವೃತ್ತ, ಡಿಸಿಸಿ ಬ್ಯಾಂಕ್ ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಮೈಸೂರು-ಬೆಂಗಳೂರು ಹೆದ್ದಾರಿ, ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಕರ್ನಾಟಕ ಬಾರ್ ಸರ್ಕಲ್, ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ, ವಿನೋಬಾ ರಸ್ತೆ ಮಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿಕೊಂಡು ಮಂಡ್ಯ ವಿವಿ ಆವರಣದಲ್ಲಿರುವ ವೇದಿಕೆ ಬಳಿ ಸಂಪನ್ನಗೊಂಡಿತು.ಶ್ರೀರಾಮ, ಶ್ರೀಉಗ್ರ ನರಸಿಂಹ, ಶ್ರೀ ಹನುಮ ಟ್ಯಾಬ್ಲೋಗಳು, ಪೂಜಾ ಕುಣಿತ ಹಾಗೂ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ನಡೆಯಿತು. ಮಂಡ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹಿಂದೂ ಸಂಘಟನೆ ಕಾರ‌್ಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ದೇವರು ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಹೂಮಳೆಗರೆದರು. ಮಾರ್ಗದುದ್ದಕ್ಕೂ ರಸ್ತೆಯಲ್ಲಿ ನೀರು ಹಾಕಿ ರಂಗೋಲೆ ಬಿಡಿಸುತ್ತಿದ್ದ ದೃಶ್ಯ ಕಂಡುಬಂತು.ಜೈಶ್ರೀರಾಮ್ ಘೋಷಣೆ:ಶೋಭಾಯಾತ್ರೆಯಲ್ಲಿ ಬರುತ್ತಿದ್ದ ಕಾರ್ಯಕರ್ತರಿಗೆ ಸಾರ್ವಜನಿಕರು ನೀರು, ಮಜ್ಜಿಗೆ ನೀಡುತ್ತಿದ್ದರು. ಯಾತ್ರೆಯಲ್ಲಿ ಸಾಗುತ್ತಿದ್ದ ಕಾರ್ಯಕರ್ತರು ಜೈಶ್ರೀರಾಮ್, ಜೈ ಹನುಮಾನ್ ಘೋಷಣೆ ಮೊಳಗಿಸಿದರು. ಮತ್ತೆ ಕೆಲವರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರೆ, ಒಂದಷ್ಟು ಮಂದಿ ಡಿಜೆ ಸೌಂಡ್ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು.ಮಾರ್ಗ ಬದಲಾವಣೆಶೋಭಯಾತ್ರೆ ನಡೆಯುವ ಮಾರ್ಗದಲ್ಲಿ ಬಸ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪೊಲೀಸರು ವಾಹನಗಳನ್ನು ಶೋಭಾಯಾತ್ರೆ ಸಂಚರಿಸುವ ಮಾರ್ಗದಿಂದ ಸ್ವಲ್ಪ ದೂರವೇ ಮಾರ್ಗ ಬದಲಾವಣೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.ಕೇಸರಿಮಯ ಶೋಭಾಯಾತ್ರೆ ಅಂಗವಾಗಿ ನಗರದ ಪೇಟೆ ಬೀದಿ, ಹೊಳಲು ವೃತ್ತ, ಜೆ.ಸಿ.ವೃತ್ತ, ಹೆದ್ದಾರಿ, ಮಹಾವೀರ ವೃತ್ತ, ವಿ.ವಿ. ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಕೇಸರಿ ತೋರಣಗಳನ್ನು ಕಟ್ಟುವ ಮೂಲಕ ಇಡೀ ನಗರವನ್ನು ಕೇಸರೀಮಯವನ್ನಾಗಿಸಲಾಗಿತ್ತು. ಈ ಬಾರಿಯ ಶೋಭಾಯಾತ್ರೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಶೋಭಾಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.ಬಿಗಿ ಬಂದೋಬಸ್ತ್ :ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ವತಃ ಎಸ್ಪಿಯವರೇ ಶೋಭಯಾತ್ರೆ ತೆರಳುವ ಮಾರ್ಗದಲ್ಲಿ ಬಂದೋಬಸ್ತ್‌ನಲ್ಲಿ ಭಾಗವಹಿಸಿ ಪೊಲೀಸರಿಗೆ ಸೂಚನೆಗಳನ್ನು ನೀಡುತ್ತಿದ್ದುದು ಕಂಡುಬಂತು.ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, 6 ಮಂದಿ ಡಿವೈಎಸ್ಪಿಗಳು, 25 ಮಂದಿ ಸಿಪಿಐಗಳು, 50 ಪಿಎಸ್‌ಐಗಳು, 4 ಕೆಎಸ್‌ಆರ್‌ಪಿ, 6 ಜಿಲ್ಲಾ ಸಶಸ್ತ್ರ ಮೀಸಲುಪಡೆ ಸೇರಿದಂತೆ 700ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಶೋಭಾಯಾತ್ರೆಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.೧೨ಕೆಎಂಎನ್‌ಡಿ-೪, ೫ಮಂಡ್ಯದಲ್ಲಿ ವಿಶ್ವಹಿಂದೂಪರಿಷತ್,್ ಬಜರಂಗದಳದ ವತಿಯಿಂದ ನಡೆದ ಶೋಭಾಯಾತ್ರೆಯ ದೃಶ್ಯಗಳು.೧೨ಕೆಎಂಎನ್‌ಡಿ-೬ಶೋಭಾಯಾತ್ರೆಯಲ್ಲಿ ಶ್ರೀ ಆಂಜನೇಯಸ್ವಾಮಿ ಸ್ತಬ್ಧಚಿತ್ರ.೧೨ಕೆಎಂಎನ್‌ಡಿ-೭ಶ್ರೀ ಉಗ್ರನರಸಿಂಹನ ಟ್ಯಾಬ್ಲೋ

Share this article