ಬಕ್ರೀದ್ ಹಬ್ಬದ ಸುತ್ತಮುತ್ತ ಕಲಬುರಗಿ ನಗರ ಒಂದರಲ್ಲೇ ಕನಿಷ್ಠ ಪಕ್ಷ 9 ಸಾವಿರದಷ್ಟು ಗೋವುಗಳ ಹತ್ಯೆ ನಡೆದಿದೆ. 2020ರ ಗೋಹತ್ಯೆ ನಿಷೇಧ ಕಾಯ್ದೆಯ ಸೆಕ್ಷನ್ 69ರಂತೆ ಗೋವುಗಳ ಹತ್ಯೆ ತಡೆಗಟ್ಟಬೇಕಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲರೂ ಜಾಣ ಕುರುಡುತನ ತೋರಿದ್ದಾರೆ.
ಕಲಬುರಗಿ : ಬಕ್ರೀದ್ ಹಬ್ಬದ ಸುತ್ತಮುತ್ತ ಕಲಬುರಗಿ ನಗರ ಒಂದರಲ್ಲೇ ಕನಿಷ್ಠ ಪಕ್ಷ 9 ಸಾವಿರದಷ್ಟು ಗೋವುಗಳ ಹತ್ಯೆ ನಡೆದಿದೆ. 2020ರ ಗೋಹತ್ಯೆ ನಿಷೇಧ ಕಾಯ್ದೆಯ ಸೆಕ್ಷನ್ 69ರಂತೆ ಗೋವುಗಳ ಹತ್ಯೆ ತಡೆಗಟ್ಟಬೇಕಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲರೂ ಜಾಣ ಕುರುಡುತನ ತೋರಿ ಸಾವಿರಾರು ಗೋವುಗಳ ಮಾರಣಹೋಮಕ್ಕೆ ಕಾರಣರಾಗಿದ್ದಾರೆ ಎಂದು ದೂರಿರುವ ವಿಶ್ವ ಹಿಂದು ಪರಿಷತ್ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು ಈ ರೀತಿ ಜಿಲ್ಲಾಡಳಿತ ಒಂದೇ ಕೋಮಿನ ಪರ ವಾಲುವಂತಾಗಲು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ, ಇದು ಅಕ್ಷಮ್ಯ ಅಪರಾಧವೆಂದು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಅಧ್ಯಕ್ಷ ಶ್ರೀಮಂತ ನವಲ್ದಿ, ಉಪಾಧ್ಯಕ್ಷ ಪ್ರಶಾಂತ ಗುಡ್ಡಾ, ಕಾರ್ಯದರ್ಶಿ ಅಶ್ವಿನಿ ಕುಮಾರ್ ಡಿ, ಕಾರ್ಯಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನ ಕೋಡ್ಲಾ, ಅಶ್ವಿನಿ ಕುಮಾರ್, ರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬೂರ್, ಗೋಹತ್ಯೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳಿಗೆ ಸರಕಾರ ಸೂಚಿಸಿದ್ದರೂ, ಅವೆಲ್ಲವೂ ಕಲಬುರಗಿ ಜಿಲ್ಲಾಡಳಿತದ ಏಕಪಕ್ಷೀಯ, ಒಂದೇ ಕೋಮಿನ ಪರವಾಗಿರುವಂತಹ ನಿಲುವುಗಳಿಂದಾಗಿ ಕೆಲಸಕ್ಕೆ ಬಾರದಂತಾಗಿ ಗೋಹತ್ಯೆ ವ್ಯಾಪಕವಾಗಿ ನಡೆದಿದೆ ಎಂದು ದೂರಿದರು.
ಗೋಹತ್ಯೆಗೆ ಕ್ರಮ ಕೈಗೊಳ್ಳಿ, ನಗರಕ್ಕೆ ಬರುವ ಗೋವುಗಳನ್ನು ತಡೆಯಿರಿ ಎಂದು ನಗರ ಪೊಲೀಸ್ ಕಮೀಷ್ನರ್‌ಗೆ ಮನವಿ ಮಾಡಿದಾಗ ಅವರು ತಮ್ಮ ವ್ಯಾಪ್ತಿಯಲ್ಲಿಲ್ಲವೆಂದು ಹಲವು ಕಾನೂನು ಹೇಳುತ್ತ ತಹಸೀಲ್ದಾರ್ ಬಳಿ ಸಾಗಹಾಕಿದರು. ಅಲ್ಲಿಂದ ನಾವು ಕಾನೂನು ರೀತ್ಯಾ ಆದೇಶ ತಂದರೂ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಗೋವುಗಳನ್ನು ತಡೆಯಲೇ ಇಲ್ಲ. ಅನೇಕ ಗೋವುಗಳ ಸಾಗಾಟ ನಡೆದರೂ ಕೂಡಾ ಅವುಗಳನ್ನು ಸಾಗ ಹಾಕುವ ಯತ್ನ ನಡೆಯಿತೇ ವಿನಹಃ ತಡೆಯುವ ಪ್ರಯತ್ನ ಪೊಲೀಸರು ಮಾಡಲಿಲ್ಲವೆಂದು ಪೊಲೀಸರ ವಿರುದ್ಧ ಹಿಂದು ಸಂಘಟನೆಗಳ ಮುಖಂಡರು ಅಸಮಾಧಾನ ಹೊರಹಾಕಿದರು.ಗೋಹತ್ಯೆ ತಡೆಗೆ ಪಶು ವೈದ್ಯರ ತಂಡಗಳಿವೆ. ಪೊಲೀಸರಿದ್ದಾರೆಂದು ಹಬ್ಬದ ಮುಂಚೆ ಜಿಲ್ಲಾಧಿಕಾರಿ ಸಭೆ ನಡೆಸಿ ಮಾಹಿತಿ ನೀಡಿದ್ದು, ಅನುಷ್ಠಾನಕ್ಕೆ ಬಾರದೆ ಪತ್ರಿಕೆಗಳ ಹೇಳಿಕೆಯಾಯ್ತು. ವಾಸ್ತವದಲ್ಲಿ 9 ಸಾವಿರದಷ್ಟು ಗೋವುಗಳ ಸಹತ್ಯೆಯಾಗಿದೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವೆಂದು ಮಲ್ಲಿಕಾರ್ಜುನ ಕೋಡ್ಲಿ ದೂರಿದರು.
ಪಾಲಿಕೆಯಿಂದ 16 ಸಾವಿರ ಕಿಟ್ ವಿತರಣೆ:
ನಾವು ಜಿಲ್ಲಾಧಿಕಾರಿಗೆ ಸಭೆಯಲ್ಲಿನ ಚರ್ಚೆ, ಪಾಲಿಕೆಯ ಕ್ರಮಗಳನ್ನು ಕೂಲಂಕುಷವಾಗಿ ಗಮನಿಸಿದ್ದೇವೆ. ಪಾಲಿಕೆಯವರೇ ಹೇಳುವಂತೆ 16 ಸಾವಿರ ಕಿಟ್ ಅವರು ಬಕ್ರೀದ್ ಸಮಯದಲ್ಲಿ ಮನೆ ಮನೆಗೆ ವಿತರಿಸಿದ್ದಾರೆ. ಈ ಕಿಟ್‌ಗಳಲ್ಲಿ ಗೋವುಗಳ ಎಲುಬುದು, ತ್ಯಾಜ್ಯ ಸಂಗ್ರಹಿಸಿಡಬೇಕು, ತಾವು ಬಂದು ಅವುಗಳನ್ನೆಲ್ಲ ಸಂಗ್ರಹಿಸಿ ಒಯ್ಯೋದಾಗಿಯೂ ಹೇಳಿದ್ದರು. ಇದನ್ನ ಅಂದಾಜು ಮಾಡಿ ನೋಡಿದರೆ 9 ಸಾವಿರದಷ್ಟು ಗೋವುಗಳ ಹತ್ಯೆಯಾಗಿದೆ. ಕಳೆದ 3 ದಿನದಿಂದ ಪಾಲಿಕೆ ಸಿಬ್ಬಂದಿ ತಗ್ಗು ತೋಡಿ ಬಕ್ರೀದ್ ತ್ಯಾಜ್ಯವನ್ನ ವಿಲೇವಾರಿ ಮಾಡುವಲ್ಲಿ ತೊಡಗಿದ್ದಾರೆ ಎಂದು 9 ಸಾವಿರ ಗೋವುಗಳ ತಮ್ಮ ಲೆಕ್ಕಾಚಾರ ಸಮರ್ಥಿಸಿಕೊಂಡರು.
ಗೋವುಗಳ ಹತ್ಯೆಗೆ ಶ್ರದ್ಧಾಂಜಲಿ ಮಾಡಲು ತಾವು ಮುಂದಾದಾಗ ಯಾವುದೇ ಕೋಮಿಗೆ ಧಕ್ಕೆಯಾಗದಂತೆ ನೀವು ಮಾಡಬೇಕು, ಇಲ್ಲದೆ ಹೋದಲ್ಲಿ ನಿಮ್ಮನ್ನೆ ಬಂಧಿಸಬೇಕಾಗುತ್ತದೆ ಎಂದು ಉತ್ತರ ಎಸಿಪಿ ಚಂದ್ರಶೇಖರ್ ಹೇಳಿದ್ದಾರೆ. ಇವರೇ ಬಕ್ರೀದ್ ಹಬ್ಬದಲ್ಲಿ ಕಿಟ್ ವಿತರಣೆ, ಅದರ ಬಳಕೆಯನ್ನು ಮುಂಚೂಣಿಯಲ್ಲಿದ್ದು ಜನತೆಗೆ ಹೇಳಿದ್ದಾರೆ. ಇಂತಹವರು ಗೋವುಗಳ ರಕ್ಷಣೆಗೆ ನಿಲ್ಲಬೇಕೋ ಅವುಗಳ ಹತ್ಯೆಗೇ ನಿಲ್ಲಬೇಕೋ? ಇಂತಹ ಅಧಿಕಾರಿಗಳು ಕಲಬುರಗಿಗೆ ಬೇಕೆ ಎಂದು ಪ್ರಶ್ನಿಸಿದರು.
ಬಕ್ರೀದ್ ಸಂದರ್ಭದಲ್ಲಿನ ಅಕ್ರಮ ಗೋವುಗಳ ಕಡಿತ ತಪ್ಪಿಸಲು ಸಂಘಟನೆಯಿಂದ ಸಾಕಷ್ಟು ಮನವಿ ಸಲ್ಲಿಸಿದರೂ ಅವೆಲ್ಲವನ್ನು ಕಾಲಕಸವಾಗಿಸಿದ್ದಾರೆ. ಆಡಳಿತವೇ ಒಂದು ಕೋಮಿನ ಪರ ನಿಂತರೆ ನಮಗೆ ನ್ಯಾಯ ಕೊಡುವವರು ಯಾರು? ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಈ ಬಗ್ಗೆ ಅಗತ್ಯ ಕ್ರಮಕ್ಕೆ ಆಸಕ್ತಿ ತೋರಿಲ್ಲ ಎಂದು ದೂರಿದರು.
ನಾವು ಕ್ರಮಕ್ಕಾಗಿ ಕೋರಿದ್ದರೂ ಯಾರೂ ಕ್ರಮಕ್ಕೆ ಮುಂದಾಗಿಲ್ಲ. ನಮ್ಮ ಈ ಹೇಳಿಕೆ ಹೊರಬಿದ್ದ 24 ಗಂಟೆಯಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಎಸಿಪಿ ನಾರ್ಥ್ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನೇ ಮುತ್ತಿಗೆ ಹಾಕಿ ಪ್ರಶ್ನಿಸುತ್ತೇವೆ. ನ್ಯಾಯ ಕೇಳುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ತಹಸೀಲ್ದಾರ್ ಕೋರಿಕೆ ಪತ್ರವಿದ್ದರೂ ಕ್ರಮಕ್ಕೆ ಮುಂದಾಗದ ಪೊಲೀಸರು
ಬಕ್ರೀದ್ ಹಬ್ಬದ ನಿಮಿತ್ತ ನಡೆಯುವ ಗೋಹತ್ಯೆ ತಡೆಗೆ ಸರಕಾರದ ಆದೇಶ 69- 2022ರಂತೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಕಲಬುರಗಿ ತಹಸೀಲ್ದಾರರು ಕೋರಿಕೆ ಪತ್ರ ನೀಡಿದ್ದರೂ ಕೂಡಾ ಕಲಬುರಗಿ ಪೊಲೀಸ್ ಕಮೀಷ್ನರ್ ಇದ್ಯಾವುದನ್ನೂ ಕೇರ್ ಮಾಡದೆ ತಮ್ಮ ಪಾಡಿಗೆ ತಾವಿದ್ದರು. ಅವರ ಈ ಧೋರಣೆಯೇ ಸಾವಿರಾರು ಗೋವುಗಳ ಮಾರಣ ಹೋಮಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು. ಗೋವುಗಳನ್ನು ವಾಮಮಾರ್ಗದಿಂದ ತರಲಾಗುತ್ತಿದ್ದು, ಅವುಗಳ ಅಕ್ರಮ ಸಾಗಾಣಿಕೆ ತಡೆಯಬೇಕು ಎಂದು ತಹಸೀಲ್ದಾರ್ ಕೋರಿಕೆ ಪತ್ರ ನೀಡಿದ್ದರೂ ನಿರೀಕ್ಷಿತ ಕ್ರಮ ಯಾಕೆ ಪೊಲೀಸ್ ಕಮೀಷ್ನರ್ ಕೈಗೊಳ್ಳಲಿಲ್ಲವೆಂದು ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ತಿನ ಮುಖಂಡರು ಪ್ರಶ್ನಿಸಿದರು.