ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ: ಒ.ಎಂ.ಪಂಕಜಾಕ್ಷನ್ ಕರೆ

KannadaprabhaNewsNetwork |  
Published : Jun 20, 2024, 01:08 AM IST
ಚಿತ್ರ : 19ಎಂಡಿಕೆ1 : ತರಬೇತಿ ಮತ್ತು ಮುಂದುವರೆದ ತರಬೇತಿ ಶಿಬಿರದಲ್ಲಿ  ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಓ.ಎಂ.ಪಂಕಜಾಕ್ಷನ್  ಮಾತನಾಡಿದರು.  | Kannada Prabha

ಸಾರಾಂಶ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರದಿಂದ ಜೂ.24 ರವರೆಗೆ ಶಿಕ್ಷಕರಿಗಾಗಿ ನಡೆಯುವ ಮೂಲ ತರಬೇತಿ ಮತ್ತು ಮುಂದುವರಿದ ತರಬೇತಿ ಶಿಬಿರವನ್ನು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಒ.ಎಂ.ಪಂಕಜಾಕ್ಷನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ ಮತ್ತು ಉಜ್ವಲ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಒ.ಎಂ.ಪಂಕಜಾಕ್ಷನ್ ಹೇಳಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರದಿಂದ ಜೂ.24 ರವರೆಗೆ ಶಿಕ್ಷಕರಿಗಾಗಿ ನಡೆಯುವ ಮೂಲ ತರಬೇತಿ ಮತ್ತು ಮುಂದುವರಿದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತಿ ಶಿಬಿರಗಳು ಬದಲಾವಣೆಗೆ ದಾರಿಯಾಗಿದ್ದು, ಶಿಸ್ತು ರೂಪಿಸುತ್ತದೆ. ಸಮಾಜಮುಖಿಯಾಗಿ ಬೆಳೆಯಲು ಸಹಕರಿಸುತ್ತದೆ, ಸಕಾರಾತ್ಮಕ ಚಿಂತನೆ, ದೃಢತೆ, ವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಚಿಂತನೆ ಬಿಡಲು ಸಹಕಾರಿಯಾಗಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಎಲ್ಲರಿಗೂ ಉತ್ತಮ ಸಂದೇಶ ನೀಡುತ್ತದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಮಾರ್ಗದರ್ಶನದಲ್ಲಿ ಕೊಂಡೊಯ್ಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ನಕರಾತ್ಮಕ ವಿಚಾರಗಳಿಗೆ ವಿದ್ಯಾರ್ಥಿಗಳು ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಯಾವಾಗಲು ವಿಭಿನ್ನವಾಗಿ ಆಲೋಚಿಸುವಂತೆ ಮಾಡಬೇಕು. ವಿದ್ಯಾರ್ಥಿಗಳ ಆಸಕ್ತ ವಿಷಯಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತ ವಿಜಯ್, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತರಬೇತಿ ಮುಖ್ಯ. ಒಬ್ಬ ವ್ಯಕ್ತಿ ಯಾವುದೇ ಕಾರ್ಯ ಮಾಡಬೇಕಾದರೂ ಅದಕ್ಕೆ ತರಬೇತಿಯ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಶಿಕ್ಷಕರು ಶಿಲ್ಪಿಗಳಿಗೆ ಸಮಾನ, ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಉತ್ತಮ ಮಾರ್ಗದರ್ಶನ ನೀಡಿದರೆ ನಮ್ಮ ದೇಶದ ಅತ್ಯಮೂಲ್ಯ ವ್ಯಕ್ತಿಗಳಾಗುತ್ತಾರೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಶಾಲೆಯಲ್ಲಿ ಪಾಠದ ಜೊತೆಗೆ ಶಿಸ್ತು, ದೃಢ ನಿರ್ಧಾರ, ಮುನ್ನುಗುವ ಸ್ವಭಾವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗಷ್ಟೆ ಸೀಮಿತಗೊಳಿಸದೆ ತರಬೇತಿಯ ಮೂಲಕ ಸಂಯಮ, ಚಿಂತನೆ, ಪರೋಪಕಾರ, ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಮೂಲ ತರಬೇತಿ ಮತ್ತು ಮುಂದುವರೆದ ತರಬೇತಿ ಜೂ.24ರ ವರೆಗೆ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಶಿಕ್ಷಕರು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಮೂಲ ಉದ್ದೇಶ, ಧ್ಯೇಯಗಳು, ಧ್ವಜಾರೋಹಣ ಮತ್ತು ಪ್ರಥಮ ಚಿಕಿತ್ಸೆ, ಶಾರೀರಿಕ ವ್ಯಾಯಾಮ, ಕೌಶಲ್ಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಗೈಡ್ಸ್ ಆಯುಕ್ತ ರಾಣಿ ಮಾಚಯ್ಯ, ಜಿಲ್ಲಾ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್ ತರಬೇತಿ ಆಯುಕ್ತ ಮೈಥಿಲಿ ರಾವ್, ಸಹಾಯಕ ಗೈಡ್ಸ್ ಆಯುಕ್ತ ಸುಲೋಚನ, ತರಬೇತಿ ನಾಯಕ ಶಿವಶಂಕರ್, ಗೈಡ್ಸ್ ವಿಭಾಗದ ಸಹ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ, ಪ್ರಮುಖರಾದ ಕುಮಾರಸ್ವಾಮಿ, ಗಣೇಶ್, ಬೋಜಮ್ಮ ಮತ್ತಿತರರಿದ್ದರು.

ಸ್ಕೌಟ್ಸ್ ತರಬೇತಿ ಆಯುಕ್ತ ರಂಜಿತ್ ಸ್ವಾಗತಿಸಿದರು. ಪೊನ್ನಂಪೇಟೆ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ವಾಮನ ನಿರೂಪಿಸಿದರು. ಸಹಾಯಕ ತರಬೇತಿ ಆಯುಕ್ತ ಆಲಿಮಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ