ಹಳಿಯಾಳ: ತ್ಯಾಗ, ಬಲಿದಾನ ಪ್ರತೀಕವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದ ಮುಪ್ತಿ ಫಯಾಜ ಅಹ್ಮದ ಖಾಸ್ಮಿ ಇಟ್ಟಂಗಿವಾಲೆ ಅವರು, ದೇವರಿಗೆ ನಿಷ್ಠೆ, ಶ್ರದ್ಧೆ, ವಿಧೇಯತೆ ತೋರುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ. ದೇವರನ್ನು ನಂಬಿದವರ ಬಾಳು ಶಾಶ್ವತವಾಗಿರುತ್ತದೆ ಎಂಬ ಪರಮಾರ್ಥಿಕ ಸತ್ಯವನ್ನು ಸಾರುವ ಹಬ್ಬವೇ ಬಕ್ರೀದ್. ಈ ಹಬ್ಬವು ನಮ್ಮೆಲ್ಲರ ಬಾಳಿನಲ್ಲಿ ಹಾಗೂ ನಾಡಿನಲ್ಲಿ ಸುಖ, ಸಮೃದ್ಧಿ, ಶಾಂತಿಯನ್ನು ತರಲಿ ಎಂದು ಹಾರೈಸಿದರು.
ಜಾಮೀಯಾ ಮಸೀದಿಯ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ನಾಯಕ ಅವರು ಹಬ್ಬದ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.ಪ್ರಾರ್ಥನಾ ವಿಧಿಯಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲಿಂ ಬಸರಿಕಟ್ಟಿ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಮಹಮದ್ಖಯ್ಯಾಂ ಮುಗದ, ಸಮಾಜದ ಹಿರಿಯರಾದ ಉದ್ಯಮಿ ಆರ್.ಎಂ. ಬಸರಿಕಟ್ಟಿ, ನಿಕಟಪೂರ್ವ ಪುರಸಭಾ ಅಧ್ಯಕ್ಷ ಅಜರ್ ಬಸರಿಕಟ್ಟಿ, ಪುರಸಭಾ ಸದಸ್ಯ ಫಯಾಜ್ ಶೇಖ್, ಪ್ರಮುಖರಾದ ಇಮ್ತಿಯಾಜ್ ಶೇಖ್, ಎಂ.ಎ. ಕಾಗದ, ಪುರಸಭಾ ಮಾಜಿ ಅಧ್ಯಕ್ಷ ಖಾಕೇಶಾ ಮಕಾನದಾರ, ಇಮ್ತಿಯಾಜ್ ಮನಿಯಾರ, ಸುಭಾನಿ ಗೋರಿಖಾನ್ ಹಾಗೂ ಮೊದಲಾದವರು ಇದ್ದರು.
ಪಟ್ಟಣದ ಯಲ್ಲಾಪುರ ರಸ್ತೆ ಬನ್ನಿಕಟ್ಟೆ ಬಳಿಯ ನೂರಾನಿ ಮಸೀದಿ ಹತ್ತಿರ ಪಟ್ಟಣದ 5 ಮಸೀದಿಗಳ ಮುಸ್ಲಿಮರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಶುಭ್ರವಾದ ಹೊಸ ಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ನಂತರ ಸಾಮೂಹಿಕವಾಗಿ ಅಲ್ಲಾಹನ ನಾಮಸ್ಮರಣೆ ಮಾಡುತ್ತ ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಈದ್- ಉಲ್- ಅದ್ಹಾ(ಬಕ್ರೀದ್) ಹಬ್ಬದ ವಿಶೇಷ ಸಾಮೂಹಿಕವಾಗಿ ನಮಾಜ್ ಸಲ್ಲಿಸಿದರು.ಹಾಫ್ಹೀಜ ಜೈನುಲಾಬಿದ್ದಿನ ಅವರ ನೇತೃತ್ವದಲ್ಲಿ ಮುಸ್ಲಿಮರು ಈದ್- ಉಲ್- ಅದ್ಹಾ(ಬಕ್ರೀದ್) ಹಬ್ಬದ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ಪ್ರಾರ್ಥನೆ ನಂತರ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡರು. ಪಿಎಸ್‌ಐ ಪರಶುರಾಮ ಮಿರ್ಜಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ನಮಾಜ ಮುಗಿದ ನಂತರ ಮುಸ್ಲಿಮರು ಖಬರಸ್ಥಾನಕ್ಕೆ ತೆರಳಿ ಸ್ವರ್ಗಸ್ಥರಾದ ತಮ್ಮ ಬಂದುಬಳಗದ ಘೋರಿಗಳಿಗೆ ಹೂಮಾಲೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ತಾಲೂಕಿನ ಪಾಳಾ, ಮಳಗಿ, ಕಾತೂರ, ಇಂದೂರ ಗ್ರಾಮ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡ ವಿಜೃಂಭಣೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.