- ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ । ಬಡವರಿಗೆ ಆಹಾರ, ನಗದು ಇತರೆ ವಸ್ತುಗಳ ದಾನ - - -
ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ, ಜಿಲ್ಲಾದ್ಯಂತ ಮುಸ್ಲಿಮ್ ಧರ್ಮೀಯರು ಗುರುವಾರ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಮಾಡುವುದರ ಮೂಲಕ ಆಚರಿಸಿದರು.
ನಗರದ ಹಳೇ ಪಿ.ಬಿ. ರಸ್ತೆಯ ಈದ್ಗಾ ಮೈದಾನದ ಸೇರಿದಂತೆ ನಗರ, ಜಿಲ್ಲೆಯ ವಿವಿಧ ಈದ್ಗಾ ಮೈದಾನಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯ ನಾಗರೀಕರವರೆಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರರಿಗೆ ಬಕ್ರೀದ್ ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು.ಇಲ್ಲಿನ ಹಳೇ ಪಿ.ಬಿ. ರಸ್ತೆಯ ಈದ್ಗಾ ಮೈದಾನ, ಮಾಗಾನಹಳ್ಳಿ ರಸ್ತೆಯ ರಜಾವುಲ್ ಮುಸ್ತಫಾ ನಗರದ ಈದ್ಗಾ ಮೈದಾನ, ಕೈಗಾರಿಕಾ ಪ್ರದೇಶ ಶ್ರೀರಾಮ ನಗರದ ಮೈದಾನಗಳಿಗೆ ದ್ವಿಚಕ್ರ ವಾಹನ, ಆಟೋ, ಕಾರು, ಸೈಕಲ್, ಅಪೆ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರು ತೆರಳಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಾಮೂಹಿಕ ಪ್ರಾರ್ಥನೆ ನಂತರ ಅಸಹಾಯಕರು, ಬಡವರಿಗೆ ಮುಸ್ಲಿಮರು ಕೈಲಾದ ದಾನ ಮಾಡಿದರು. ನೆರೆಹೊರೆಯವರು, ತಮ್ಮ ಶಕ್ತ್ಯಾನುಸಾರ ಬಡವರಿಗೆ ಆಹಾರ, ನಗದು ಇತರೆ ವಸ್ತುಗಳನ್ನು ದಾನ ಮಾಡಿದರು. ಹಬ್ಬಕ್ಕೆ ಹೊಸ ಬಟ್ಟೆ ಧರಿಸಿ, ಮಕ್ಕಳಾದಿಯಾಗಿ ಸಂಭ್ರಮದಲ್ಲಿದ್ದರು. ಪ್ರಾರ್ಥನೆ ನಂತರ ತಮ್ಮ ಮನೆಗಳಲ್ಲಿ ಬಾಡೂಟ ಸೇರಿದಂತೆ ಭಕ್ಷ್ಯ ಭೋಜನ ಮಾಡಿ, ಸಂಭ್ರಮದಲ್ಲಿ ಮಿಂದೆದ್ದರು. ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಮುಖಂಡರು, ಧರ್ಮೀಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
-28ಕೆಡಿವಿಜಿ9, 10, 11, 12: ದಾವಣಗೆರೆಯಲ್ಲಿ ಬಕ್ರೀದ್ ಹಬ್ಬ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.