ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸರ್ಕಾರ 100 ದಿನ ಪೂರೈಸುವ ಸೆಪ್ಟೆಂಬರ್ ಎರಡನೇ ವಾರದಲ್ಲಿ ಮಹತ್ವದ ಯೋಜನೆಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಭೆ ನಡೆಸಿ ನೀಲನಕ್ಷೆ ಸಿದ್ಧಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಿನೂತನ ಹಾಗೂ ವಿಶಿಷ್ಟ ಯೋಜನೆಗಳನ್ನು ಪ್ರಕಟಿಸಲು ಉತ್ಸುಕರಾಗಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳ ಮೂಲಕ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಂತಹ ಮಾದರಿ ಯೋಜನೆಗಳನ್ನು ನೀಡುವ ಮೂಲಕ ವಿಶಿಷ್ಟ ಛಾಪು ಒತ್ತಲು ಡಿ.ಕೆ.ಶಿವಕುಮಾರ್ ಅಣಿಯಾಗಿದ್ದಾರೆ. ಇದಕ್ಕಾಗಿ ಮೊದಲು ತಮಗಿರುವ ಆರ್ಥಿಕ ಮಿತಿ ಅರಿಯಲು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಅಧ್ಯಯನಕ್ಕೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.
ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ನೀಲನಕ್ಷೆ
ಹಿಂದಿನ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರವು ಜಲಸಂಪನ್ಮೂಲ ಇಲಾಖೆಯಲ್ಲೇ 1 ಲಕ್ಷ ಕೋಟಿಗೂ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿ ಹೋಗಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಸಿದ್ದರಾಮಯ್ಯ ಅವರು ಸಮರ್ಥವಾಗಿ ಆರ್ಥಿಕ ಸ್ಥಿತಿಯನ್ನು ನಿಭಾಯಿಸಿದ್ದಾರೆ. ಜತೆಗೆ ಪಂಚ ಗ್ಯಾರಂಟಿ ಯೋಜನೆ, ಅಭಿವೃದ್ಧಿ ಯೋಜನೆ ನೀಡಿದ್ದು, ಇವುಗಳನ್ನು ನಿರ್ವಹಿಸುವ ಜತೆಗೆ ಹೊಸ ಯೋಜನೆಗಳನ್ನು ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಜೋಡೋ ಸಂಘಕ್ಕೆ ಹಣ:
ಆರ್‌ಎಸ್‌ಎಸ್ ನೂರಾರು ಶಿಕ್ಷಣ ಸಂಸ್ಥೆ, ಜಾಗಗಳನ್ನು ಮಾಡಿಕೊಂಡಿದೆ. ತಳಮಟ್ಟದಿಂದ ತಮ್ಮವರನ್ನು ರೂಪಿಸುವ ಕೆಲಸ ಮಾಡುತ್ತಿದೆ. ಇದೇ ರೀತಿ ಕಾಂಗ್ರೆಸ್ ಸರ್ಕಾರದಿಂದ ಪಕ್ಷಾತೀತವಾಗಿ ಯುವಕರನ್ನು ಒಗ್ಗೂಡಿಸಲು ಭಾರತ್ ಜೋಡೋ ಸಂಘಕ್ಕೆ ಹಣ ನೀಡಲು ತೀರ್ಮಾನಿಸಿದ್ದು, ಶತಾಯಗತಾಯ ಇದಕ್ಕೆ ಹಣ ಹೊಂದಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
- ಸೆಪ್ಟೆಂಬರ್ 2ನೇ ವಾರದಲ್ಲಿ ಸಿಎಂ ಆಗಿ 100 ದಿನ ಪೂರೈಸಲಿರುವ ಡಿ.ಕೆ.ಶಿವಕುಮಾರ್ । ಈ ವೇಳೆ ಮಹತ್ವದ ಯೋಜನೆಗಳ ಘೋಷಣೆ
- ಈ ಬಗ್ಗೆ ಮುಂದಿನ 2 ದಿನದಲ್ಲಿ ಮಹತ್ವದ ಸಭೆ ನಡೆಸಲಿರುವ ಮುಖ್ಯಮಂತ್ರಿ । ಆ ಸಭೆಯಲ್ಲಿ ನೀಲನಕ್ಷೆ ಸಿದ್ಧಪಡಿಸಲು ನಿರ್ಧಾರ: ಮೂಲಗಳು
