ಬ್ಯಾಡಗಿ ಪುರಸಭೆ ಅಧ್ಯಕ್ಷರಾಗಿ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷರಾಗಿ ಮಾಳಗಿ ಆಯ್ಕೆ

KannadaprabhaNewsNetwork |  
Published : Aug 20, 2024, 12:51 AM IST
ಮ | Kannada Prabha

ಸಾರಾಂಶ

ಬ್ಯಾಡಗಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ನಿರೀಕ್ಷೆಯಂತೆ ಬಿಜೆಪಿ ಪಾಲಾಗಿದ್ದು, ಅಧ್ಯಕ್ಷರಾಗಿ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷರಾಗಿ ಸುಭಾಸ್ ಮಾಳಗಿ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಡಗಿ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ನಿರೀಕ್ಷೆಯಂತೆ ಬಿಜೆಪಿ ಪಾಲಾಗಿದ್ದು, ಅಧ್ಯಕ್ಷರಾಗಿ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷರಾಗಿ ಸುಭಾಸ್ ಮಾಳಗಿ ಅವಿರೋಧವಾಗಿ ಆಯ್ಕೆಯಾದರು.

ಮೀಸಲಾತಿ ನಿಗದಿಯಾಗದೇ ಕಳೆದ ಒಂದೂವರೆ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್ಸಿ) ಮೀಸಲು ನಿಗದಿಯಾಗಿದ್ದು, ಸೋಮವಾರ ಚುನಾವಣೆ ನಡೆಯಿತು.

ತಲಾ ಒಂದು ನಾಮಪತ್ರ: ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಮತ ಚಲಾವಣೆ ಪ್ರಕ್ರಿಯೆ ನಡೆಯಲಿಲ್ಲ, ಹೀಗಾಗಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್‌ ಫೀರೋಜ್‌ಶಾ ಸೋಮನಕಟ್ಟಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾಗಿ ಘೋಷಿಸಿದರು.

ಇದಕ್ಕೂ ಮುನ್ನ ಬಿಜೆಪಿ ಹೈಕಮಾಂಡ್ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಮಾಳಗಿ ಅವರ ಹೆಸರನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡುವ ಮೂಲಕ ಪಕ್ಷದಲ್ಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿತ್ತು.

ಸಂಭ್ರಮಿಸಿದ ಬಿಜೆಪಿ ಕಾರ‍್ಯಕರ್ತರು: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಿಹಿ ಹಂಚಿದರಲ್ಲದೇ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು, ಈ ವೇಳೆ ಜಯ ಘೋಷಗಳು ಮುಗಿಲು ಮಟ್ಟಿದವು.

ಸ್ಥಾನ ಅಲಂಕರಿಸಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು: ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಕಚೇರಿಗಳನ್ನು ಪೂಜೆ ನೆರವೇರಿಸುವುದು ವಾಡಿಕೆ, ಇಂದಿನ ದಿನವೇ ಪ್ರಾಶಸ್ತ್ಯದ ದಿನವಾಗಿದ್ದರಿಂದ ವೈದಿಕ ಪಾಠಶಾಲೆ ವಟುಗಳಿಂದ ಶಾಸ್ತ್ರೋಸ್ತಕವಾಗಿ ಪೂಜೆ ನೆರವೇರಿಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಚೇರಿಗಳನ್ನು ಅಲಂಕರಿಸಿದರು.

ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್:ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೂ ಬಹುಮತವಿಲ್ಲದ ಕಾರಣ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿಯಿತು. ಪುರಸಭೆ ಒಟ್ಟು 23 ಸದಸ್ಯರ ಪೈಕಿ 13 (ಬಿಜೆಪಿ), 4 (ಪಕ್ಷೇತರ) ಹಾಗೂ 6 (ಕಾಂಗ್ರೆಸ್) ಸದಸ್ಯರಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 4 ಜನ ಪಕ್ಷೇತರರು ಬಿಜೆಪಿ ಪಾಳಯದಲ್ಲಿ ಗುರ್ತಿಸಿಕೊಂಡಿದ್ದು, ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇತೃತ್ವದ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಅಧಿಕಾರದ ಚುಕ್ಕಾಣಿ ಯಾರ ಬಳಿಯೇ ಇರಲಿ, ರಾಜಕೀಯ ದೂರವಿಟ್ಟು ಅಭಿವೃದ್ಧಿಗೆ ಸಹಕರಿಸಲಿದ್ದೇನೆ. ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ತರುವುದಕ್ಕಾಗಿ ಶ್ರಮಿಸಲಿದ್ದೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಸೇರಿದಂತೆ ಸರ್ವ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.ರಾಜಕೀಯ ಕುಟುಂಬಕ್ಕೆ ಒಲಿದ ಅದೃಷ್ಟ: ನೂತನವಾಗಿ ಆಯ್ಕೆಯಾಗಿರುವ ಈರ್ವರು ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾಜಿ ಶಾಸಕ ಸುರೇಶಗೌಡ ಪಾಟೀಲ ಪುತ್ರರಾಗಿದ್ದರೇ, ಉಪಾಧ್ಯಕ್ಷ ಸುಭಾಸ್ ಮಾಳಗಿ ಮಾಜಿ ಶಾಸಕ ಮಾಳಗಿ ಮರಿಯಪ್ಪ ಅವರ ಮೊಮ್ಮಗನಾಗಿದ್ದಾರೆ.

ಅತೀ ಕಿರಿಯ ಉಪಾಧ್ಯಕ್ಷ:ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ಸುಭಾಸ್ ಮಾಳಗಿ ಪುರಸಭೆ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೂ ಉಪಾಧ್ಯಕ್ಷೆ ಕಲಾವತಿ ಬಡಿಗೇರ ಅತ್ಯಂತ ಕಿರಿಯ ವಯಸ್ಸಿನ ಉಪಾಧ್ಯಕ್ಷರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ