ಶಾಲೆಯಲ್ಲಿ ಮೀಟರ್ ಬಡ್ಡಿ ಸಾಲ ದಂಧೆ: ಅಪ್ರಾಪ್ತನೊಬ್ಬ ಇನ್ನೊಬ್ಬ ಅಪ್ರಾಪ್ತನಿಗೆ ಚಾಕುವಿನಿಂದ ಇರಿದು ಹಲ್ಲೆ

KannadaprabhaNewsNetwork |  
Published : Aug 20, 2024, 12:51 AM ISTUpdated : Aug 20, 2024, 10:55 AM IST
456 | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ವ್ಯವಹಾರ ಶಾಲಾ ಮಕ್ಕಳನ್ನು ತಲುಪಿದ್ದು, 10 ನೇ ತರಗತಿಯ ವಿದ್ಯಾರ್ಥಿಯೊಬ್ಬ 9 ನೇ ತರಗತಿಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಪೊಲೀಸರು ಆರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ:  ಇಷ್ಟು ದಿನ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ಮೀಟರ್‌ ಬಡ್ಡಿ ಇದೀಗ ಶಾಲೆಗಳಿಗೂ ಕಾಲಿಟ್ಟಿದೆ. ಬಡ್ಡಿ ಸಾಲಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತನೊಬ್ಬ ಇನ್ನೊಬ್ಬ ಅಪ್ರಾಪ್ತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.

ಮೀಟರ್‌ ಬಡ್ಡಿ ವ್ಯವಹಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಂತಾಗಿದ್ದು, ಯಾರು ಬಳಸಿಕೊಳ್ಳುತ್ತಿದ್ದಾರೆ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ. ಈ ಸಂಬಂಧ ಆರು ಜನ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಿರುವುದೇನು?

ಕರ್ಕಿ ಬಸವೇಶ್ವರ ನಗರದ 10ನೆಯ ತರಗತಿಯ ವಿದ್ಯಾರ್ಥಿನೊಬ್ಬ ₹10 ಸಾವಿರ ಸಾಲವನ್ನು ವಾರದ ಬಡ್ಡಿ ಲೆಕ್ಕದಲ್ಲಿ ಪಡೆದಿದ್ದನಂತೆ. ಪ್ರತಿವಾರ ನಿಯಮಿತವಾಗಿ ₹1 ಸಾವಿರ ಬಡ್ಡಿ ಕೂಡ ಕೊಡುತ್ತಿದ್ದನಂತೆ. ಆದರೆ ಕಳೆದ ಎರಡ್ಮೂರು ವಾರದಿಂದ ಈತ ಬಡ್ಡಿ ಕೊಟ್ಟಿರಲಿಲ್ಲ. ಹೀಗಾಗಿ ಈತನನ್ನು 9ನೇ ತರಗತಿ ವಿದ್ಯಾರ್ಥಿ ಸೇರಿದಂತೆ 6 ಜನರು ಕರೆದುಕೊಂಡು ಬಂದು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ಅಲ್ಲದೇ, ಚಾಕು ಸೇರಿದಂತೆ ಮತ್ತಿತರ ಮಾರಕಾಸ್ತ್ರಗಳಿಂದ ಬೆದರಿಸಿದ್ದರು. ಈ ವಿಷಯ 10ನೇ ತರಗತಿಯ ವಿದ್ಯಾರ್ಥಿಯ ಪಾಲಕರಿಗೆ ಗೊತ್ತಾಗಿ ಶೀಘ್ರದಲ್ಲೇ ಹಣ ಕೊಡುವುದಾಗಿ ಭರವಸೆ ನೀಡಿ ಮಗನನ್ನು ಬಿಡಿಸಿಕೊಂಡು ಬಂದಿದ್ದರು.

ಇದಾಗಿ ಒಂದೆರಡು ಗಂಟೆಯಲ್ಲೇ ಮತ್ತೆ ಆ ಅಪ್ರಾಪ್ತರು, ಸಾಲ ಪಡೆದಿದ್ದ 10ನೇ ತರಗತಿಯ ಬಾಲಕನ್ನು ಕರೆಸಿಕೊಂಡು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಬಾಲಕ, 9ನೇ ತರಗತಿಯ ಬಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಈತನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಚಾಕುವಿನಿಂದ ಇರಿದ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ತಮ್ಮ ಮಗನನ್ನು ಕಿಡ್ನಾಪ್‌ ಮಾಡಿ ಅಕ್ರಮವಾಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಮೀಟರ್‌ ಬಡ್ಡಿಯಂತೆ ಸಾಲ ಕೊಟ್ಟು ಹಣ, ಮೊಬೈಲ್‌ನ್ನು ಕಸಿದುಕೊಂಡಿದ್ದಾರೆ ಎಂದು 10ನೇ ತರಗತಿಯ ಬಾಲಕನ ಪಾಲಕರು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ಜನ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಡ್ಡು ಕೊಟ್ಟಿದ್ದು ಯಾರು?

ಈ ನಡುವೆ 10ನೇ ತರಗತಿಯ ವಿದ್ಯಾರ್ಥಿಗೆ ₹10 ಸಾವಿರ ಸಾಲವನ್ನು ಮೀಟರ್‌ ಬಡ್ಡಿ ಲೆಕ್ಕದಲ್ಲಿ ಕೊಟ್ಟಿದ್ದು ಯಾರು? 9ನೇ ತರಗತಿ ವಿದ್ಯಾರ್ಥಿ ಸೇರಿದಂತೆ ಆರು ಜನ ಅಪ್ರಾಪ್ತರನ್ನು ಬಿಟ್ಟು ವಸೂಲಿಗೆ ಇಳಿದಿದ್ದು ಯಾರು? ಮೀಟರ್‌ ಬಡ್ಡಿ ಹಣಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆಯೇ? ಅಥವಾ 9ನೇ ತರಗತಿ ವಿದ್ಯಾರ್ಥಿಯೇ ಸಾಲ ಕೊಟ್ಟಿದ್ದನ್ನೇ ಎಂಬುದು ಪೊಲೀಸ್‌ ತನಿಖೆಯಿಂದಲೇ ಹೊರಬೀಳಬೇಕಿದೆ.

ಬಾಲನ್ಯಾಯಮಂಡಳಿ:

ವಶಕ್ಕೆ ಪಡೆದಿರುವ ಆರು ಜನ ಅಪ್ರಾಪ್ತರನ್ನು ಬಾಲನ್ಯಾಯಮಂಡಳಿ ಎದುರಿಗೆ ಹಾಜರುಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೀಟರ್‌ ಬಡ್ಡಿ, ವಾರದ ಬಡ್ಡಿ ಲೆಕ್ಕದಲ್ಲಿ ಸಾಲ ಕೊಡುವವರು ಶಾಲಾ, ಕಾಲೇಜ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಯಾರೇ ಮೀಟರ್‌ ಬಡ್ಡಿ ವ್ಯವಹಾರ ಮಾಡುತ್ತಿದ್ದರೂ ಅವರ ವಿರುದ್ಧ ದೂರು ಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಈ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ