ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡು ಕೊಳತ್ತೂರು ಅಂಚೆ ನಿವಾಸಿ ವಿ. ಪ್ರಿಯೇಶ್ (38), ಕಾಸರಗೋಡು ಮುಳಿಯಾರು ಗ್ರಾಮದ ವಿನೋದ್ ಕುಮಾರ್ ಕೆ. (33), ಕಾಸರಗೋಡು ಪೆರಿಯಾ ನಿವಾಸಿ ಅಬ್ದುಲ್ ಖಾದರ್ ಎಸ್.ಎ. (58), ಪುತ್ತೂರು ಬಲ್ನಾಡು ರೂರಲ್‌ನ ಬೆಳಿಯೂರುಕಟ್ಟೆಯ ಆಯೂಬ್ ಖಾನ್ (51) ಬಂಧಿತರು. ಇವರಿಂದ 2,13,500 ರು. ಮೌಲ್ಯದ 500 ರುಪಾಯಿ ಮುಖಬೆಲೆಯ 427 ಖೋಟಾ ನೋಟುಗಳು ಹಾಗೂ 4 ಮೊಬೈಲ್ ಫೋನುಗಳು, 9,030 ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 500 ರು. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್‌ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಈ ಜಾಲವನ್ನು ಭೇದಿಸಿದ್ದಾರೆ ಎಂದರು.ಆರೋಪಿಗಳ ಪೈಕಿ ಪ್ರಿಯೇಶ್ ಎಂಬಾತ ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಇದರಲ್ಲಿ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದ. ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಝಿಕೋಡ್ ಮತ್ತು ದೆಹಲಿಯಿಂದ ಖರೀದಿಸಿಕೊಂಡು, ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ. ಈ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುವುದು ಎಂದು ಕಮಿಷನರ್ ತಿಳಿಸಿದರು.