ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಸಾವಿರಾರು ಎಕರೆ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿವೆ. ಪ್ರಮುಖವಾಗಿ ಗೋಮಾಳ, ಹುಲುಬನ್ನಿ, ಗುಂಡುತೋಪು ಸೇರಿ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆ ಸೃಷ್ಟಿಸಿ ಖಾಸಗಿಯವರಿಗೆ ನೀಡಲಾಗಿದೆ.
ಬಲ್ಲ ಮೂಲಗಳ ಪ್ರಕಾರ ತಾಲೂಕಿನಾದ್ಯಂತ ಇಂತಹ ದಂಧೆ ನಡೆದಿದೆ. ಅದರಲ್ಲಿಯೂ ಕಸಬಾ ಹಾಗೂ ಹಲಗೂರು ಭಾಗದಲ್ಲಿ ಹತ್ತರಿಂದ ನೂರಾರೂ ಎಕರೆ ಜಾಗವನ್ನು ಒಬ್ಬೊಬ್ಬ ವ್ಯಕ್ತಿ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಸಾಕಷ್ಟು ದೂರುಗಳು ಸಾರ್ವಜನಿರಿಂದ ಕೇಳಿಬರುತ್ತಿದ್ದವು.ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಸರ್ಕಾರ ತನಿಖಾ ತಂಡವನ್ನು ರಚಿಸುವಂತೆ ಕಳೆದ ಜು.26ರಂದು ಕಂದಾಯ ಇಲಾಖೆ(ಭೂ ಮಂಜೂರಾತಿ-2) ಪೀಠಾಧಿಕಾರಿ ಎಂ.ಎನ್.ಮುತ್ತುರಾಜ್ ಅದೇಶ ನೀಡಿದ್ದರು.
ಸಾವಿರಾರು ಎಕರೆ ಭೂಮಿ ಅಕ್ರಮವಾಗಿ ಪರಭಾರೆಯಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಿಧಾನಸಭಾ ಚುನಾವಣೆ ಮುನ್ನಾ ಸಾರ್ವಜನಿಕವಾಗಿಯೇ ಆರೋಪಿಸುತ್ತಿದ್ದರು. ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರದ ಗಮನ ಸೆಳೆದು ತಾಲೂಕಿನಲ್ಲಿ ಅಕ್ರಮವಾಗಿ ಭೂಮಿ ಪರಭಾರೆಯಾಗಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ ತನಿಖಾ ತಂಡವನ್ನು ನೇಮಿಸಿದ್ದು, ಅದರಂತೆ ಮಳವಳ್ಳಿ ತಾಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಪ್ರಕರಣದ ಬಗ್ಗೆ ದಾಖಲೆ ಸಂಗ್ರಹಿಸಬೇಕು. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ತನಿಖಾ ತಂಡಕ್ಕೆ ಹಲವು ಸೂಚನೆ ನೀಡಿದೆ.
ಮೇಲ್ನೋಟಕ್ಕೆ ಹಗರಣ ನಡೆದಿದೆ ಎಂದು ಗೊತ್ತಾದ ನಂತರ ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ. ತನಿಖಾ ತಂಡ ತಾಲೂಕಿಗೆ ಆಗಮಿಸಿ ತನಿಖೆ ಆರಂಭಿಸಿರುವುದು ತಪ್ಪಿತಸ್ಥರಿಗೆ ನಡುಕ ಹುಟ್ಟಿಸಿದೆ. ಜಮೀನು ಖರೀದಿಸಿದವರಿಗೂ ಆತಂಕ ಎದುರಾಗಿದೆ. ಮಾಹಿತಿ ಇಲ್ಲದೆ ಜಮೀನು ಖರೀದಿಸುವವರಿಗೆ ಇದರಿಂದಾಗಿ ತಲೆಬಿಸಿ ತರಿಸಿದೆ. ತನಿಖಾ ತಂಡದ ವಿಚಾರಣೆ ವೇಳೆ ಇನ್ನಷ್ಟು ಅಕ್ರಮ ಮಾಹಿತಿ ಹೊರ ಬರುವ ಸಾಧ್ಯತೆ ಹೆಚ್ಚಾಗಿದೆ.