ರಾಜೇಂದ್ರ ನಾವಿ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಸಾಮಾನ್ಯವಾಗಿ ಮಕ್ಕಳು ಎರಡೂವರೆ ವರ್ಷದ ವಯಸ್ಸಿನಲ್ಲಿ ಆಟ-ಪಾಠಗಳಲ್ಲಿ, ಕೀಟಲೆಗಳಲ್ಲಿ ಸಮಯ ಕಳೆಯುವುದು ಹೆಚ್ಚು. ಆದರೆ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಪ್ರತಿಭಾವಂತ ಬಾಲಕ ರವೀಂದ್ರ ಢಪಳಾಪುರ ತನ್ನ ಅಸಾಧಾರಣ ನೆನಪಿನ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಮೂಲಕ ದೇಶದ ಗಮನ ಸೆಳೆದಿದ್ದಾನೆ.
ಕೇವಲ 2 ವರ್ಷ 6 ತಿಂಗಳ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವ ಮೂಲಕ ಬಾಲ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ. ಜುಲೈ 24, 2023ರಂದು ಜನಿಸಿದ ರವೀಂದ್ರ ಢಪಳಾಪುರ, ತನ್ನ ಚಿಕ್ಕ ವಯಸ್ಸಿನಲ್ಲೇ ಅನೇಕ ವಿಷಯಗಳನ್ನು ನೆನಪಿಟ್ಟುಕೊಂಡು ಗುರುತಿಸುವ ಅಪರೂಪದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ಆತ 41 ಪ್ರಸಿದ್ಧ ವ್ಯಕ್ತಿಗಳು, 30 ಸ್ವಾತಂತ್ರ್ಯ ಹೋರಾಟಗಾರರು, 11 ರಾಷ್ಟ್ರೀಯ ಚಿಹ್ನೆಗಳು, 16 ಐತಿಹಾಸಿಕ ಸ್ಮಾರಕಗಳು, 27 ವಿವಿಧ ಜೀವಿಗಳು, 14 ವಿಜ್ಞಾನಿಗಳು, ಭಾರತದ 28 ರಾಜ್ಯಗಳು ಹಾಗೂ 14 ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳನ್ನು ಚಿತ್ರಗಳ ಮೂಲಕ ಗುರುತಿಸಿ ಅವರ ಹೆಸರನ್ನು ಸರಿಯಾಗಿ ಹೇಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.ಇಂತಹ ವಿಶಿಷ್ಟ ಪ್ರತಿಭೆಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ರವೀಂದ್ರನ ಸಾಧನೆಯನ್ನು ಪರಿಶೀಲಿಸಿ 2026ರ ಜನವರಿ 28 ರಂದು ಅಧಿಕೃತವಾಗಿ ಮಾನ್ಯತೆ ನೀಡಿದೆ. ಈ ಮೂಲಕ ಬಾಲಕನು ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಿಸಿಕೊಂಡು ಜಿಲ್ಲೆಯ ಹೆಮ್ಮೆಯಾಗಿ ಹೊರಹೊಮ್ಮಿದ್ದಾನೆ.
ಅಪರೂಪದ ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು, ಬಂಧು-ಬಳಗ, ಸ್ನೇಹಿತರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ವೀಣಾ ಢಪಳಾಪುರ, ಶೋಭಾ ಕಾಶಿನಾಥ್ ಕಂಕಾಳೆ, ಸೇರಿದಂತೆ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಬಾಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಈ ಪುಟ್ಟ ಪ್ರತಿಭೆಯ ಸಾಧನೆ ಜಿಲ್ಲೆಯ ಜನರಲ್ಲಿ ಹೆಮ್ಮೆ ಮೂಡಿಸಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಮಕ್ಕಳು ಅದ್ಭುತ ಸಾಧನೆ ಮಾಡಬಹುದು ಎಂಬುದಕ್ಕೆ ರವೀಂದ್ರ ಢಪಳಾಪುರ ಜೀವಂತ ಉದಾಹರಣೆಯಾಗಿದ್ದಾನೆ. ಆತನ ಮುಂದಿನ ಶಿಕ್ಷಣ ಹಾಗೂ ಭವಿಷ್ಯದ ಸಾಧನೆಗಳು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಸಾರ್ವಜನಿಕರು ಶುಭ ಹಾರೈಸಿದ್ದಾರೆ.
ಮನೆಯಲ್ಲಿಯೇ ನಿರಂತರವಾಗಿ ವಿವಿಧ ವಿಷಯಗಳ ಪರಿಚಯ ಮಾಡಿಕೊಡಲಾಗಿದ್ದು, ಆತನ ಕಲಿಕೆಯ ಆಸಕ್ತಿ ಮತ್ತು ನೆನಪಿನ ಶಕ್ತಿಯೇ ಈ ಸಾಧನೆಗೆ ಕಾರಣವಾಗಿದೆ.
-ವಿವೇಕ ಢಪಳಾಪುರ, ಕವಿತಾ ಢಪಳಾಪುರ, ಬಾಲಕ ರವೀಂದ್ರನ ತಂದೆ, ತಾಯಿ.