ಮುಂಡಗೋಡ: ಮಹಿಳಾ ಸ್ವ- ಸಹಾಯ ಗುಂಪುಗಳು ಉಳಿತಾಯ, ಆದಾಯೋತ್ಪನ್ನ ಚಟುವಟಿಕೆಗಳ ಜತೆಗೆ, ಅಪೌಷ್ಟಿಕತೆ ನಿವಾರಿಸುವಲ್ಲಿ, ಊರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳುವತ್ತ ಸಂಘಟಿತ ಪ್ರಯತ್ನ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯತ್ತ ಗಮನ ಹರಿಸುವಂತೆ ಲೊಯೋಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮೆಲ್ವಿನ್ ಲೋಬೊ ಮಹಿಳೆಯರಿಗೆ ಸಲಹೆ ನೀಡಿದರು.
ದೇಶದ ಯಾವುದೇ ಭಾಗದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ಖಂಡಿಸುವ, ಸಂವಿಧಾನ ದಿನಾಚರಣೆಯಂತಹ ರಚನಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸ್ವ- ಸಹಾಯ ಸಂಘಗಳ ಟ್ರಸ್ಟ್‌ನ ಉದಾತ್ತ ಧ್ಯೇಯವನ್ನು ಶ್ಲಾಘಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಗೀತಾ ಮಠಪತಿ ಮಾತನಾಡಿ. ಹೆಣ್ಣುಮಕ್ಕಳಿಗೆ ಇರುವ ಸುಕನ್ಯಾ ಸಮೃದ್ಧಿ ಯೋಜನೆ, ಗರ್ಭಿಣಿಯರಿಗೆ ಇರುವ ಮಾತೃವಂದನಾ ಕಾರ್ಯಕ್ರಮದ ಪ್ರಯೋಜನ ಪಡೆಯಲು ತಿಳಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಡಗೋಡ ಶಾಖೆಯ ವ್ಯವಸ್ಥಾಪಕ ಹಂಸರಾಜ್, ತಾಲೂಕು ಅಭಿವೃದ್ಧಿ ಆಕಾಂಕ್ಷಿ ಸಂಯೋಜಕಿ ನಕ್ಲೂಬಾಯಿ ಕೊಕರೆ, ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿಸೋಜಾ ಮಾತನಾಡಿದರು. ಸರೋಜಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಸುನಿತಾ ಗೌಳಿ ವರಕ್ ವರದಿ ಮಂಡಿಸಿದರು. ಖಜಾಂಚಿ ರಜಿಯಾ ಕರಡಿ, ಟ್ರಸ್ಟ್‌ನ ೨೦೨೩- ೨೪ನೇ ಸಾಲಿನ ಆಡಿಟ್ ವರದಿ ಮಂಡಿಸಿದರು. ಆಡಳಿತ ಮಂಡಳಿ ಸದಸ್ಯೆ ಅಂಜನಾ ತಹಶೀಲ್ದಾರ್ ೨೦೨೪- ೨೫ನೇ ಸಾಲಿನ ಕ್ರಿಯಾಯೋಜನೆ ಹಾಗೂ ₹೧೦೮ ಲಕ್ಷ ಮೊತ್ತದ ಆಯವ್ಯಯ ಮಂಡಿಸಿದರು.
ಫಾ. ಅಲ್ವಿನ್ ಡಿಸೋಜಾ, ಲೋಕೇಶ ಗೌಡ, ಎಲ್‌ವಿಕೆಯ ಸಿಬ್ಬಂದಿ ಉಪಸ್ಥಿತರಿದ್ದರು. ಅಂಜನಾ ತಹಶೀಲ್ದಾರ್ ಸ್ವಾಗತಿಸಿದರು. ಸುನಿತಾ ಗೌಳಿ ನಿರೂಪಿಸಿದರು, ದಾಕಲುಬಾಯಿ ವಂದಿಸಿದರು.