ಬಾಳಂಬೀಡ ಏತ ನೀರಾವರಿ ಕಾರ್ಯಾರಂಭ, ಬಸಾಪುರ ಏತ ನೀರಾವರಿಗೆ ಇನ್ನು ೨೦ ದಿನ ಬೇಕು

KannadaprabhaNewsNetwork |  
Published : Jul 12, 2026, 03:15 AM IST
ಬಾಳಂಬೀಡ ಏತ ನೀರಾವರಿಯಿಂದ  ಕೆರೆಗೆ ನೀರು ಹರಿಸುತ್ತಿರುವುದು. | Kannada Prabha

ಸಾರಾಂಶ

. ಬಾಳಂಬೀಡ ಏತ ನೀರಾವರಿಯ ನೀರೆತ್ತುವ ೫ ಮೋಟರ್‌ಗಳಲ್ಲಿ ಎರಡು ಮೋಟರ್‌ಗಳು ಕಾರ್ಯಾರಂಭ ಮಾಡಿದ್ದು, ತಾಂತ್ರಿಕ ವ್ಯವಸ್ಥೆ ನೋಡಿಕೊಂಡು ಉಳಿದ ಮೂರು ಮೋಟರ್ ಆರಂಭಿಸಲಾಗುವುದು ಎಂದು ಬೃಹತ್ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ತಿಳಿಸಿದರು.

ಹಾನಗಲ್ಲ: ಬಾಳಂಬೀಡ ಏತ ನೀರಾವರಿಯ ನೀರೆತ್ತುವ ೫ ಮೋಟರ್‌ಗಳಲ್ಲಿ ಎರಡು ಮೋಟರ್‌ಗಳು ಕಾರ್ಯಾರಂಭ ಮಾಡಿದ್ದು, ತಾಂತ್ರಿಕ ವ್ಯವಸ್ಥೆ ನೋಡಿಕೊಂಡು ಉಳಿದ ಮೂರು ಮೋಟರ್ ಆರಂಭಿಸಲಾಗುವುದು ಎಂದು ಬೃಹತ್ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಸರಬರಾಜು ಮಾಡುತ್ತಿರುವ ಆರ್‌ಆರ್ ಕಂಪನಿ ಮುನ್ಸೂಚನೆ ನೀಡದೇ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆ ಸೃಷ್ಟಿಸಿದ್ದರಿಂದ ವಿದ್ಯುತ್ ವ್ಯತ್ಯಯವಾಗಿ ಬಾಳಂಬೀಡ ಏತ ನೀರಾವರಿಯಿಂದ ನೀರು ಹರಿಸಲು ವಿಳಂಬವಾಯಿತು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗ ನದಿಯಲ್ಲಿ ನೀರಿರುವುದರಿಂದ ನೀರು ಇರುವಷ್ಟು ದಿನ ಅತ್ಯಂತ ಕಾಳಜಿಯಿಂದ ನೀರು ಹರಿಸಲಾಗುತ್ತಿದೆ. ನೀರು ಹರಿಸಲು ಆರೇಳು ದಿನ ವಿಳಂಬವಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಈ ನೀರಾವರಿಗೆ ಸಂಬಂಧಿಸಿದಂತೆ ಎಲ್ಲ ಸಿಬ್ಬಂದಿ ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಶುಕ್ರವಾರ ರಾತ್ರಿ ಬಾಳಂಬೀಡ ಏತ ನೀರಾವರಿಯ ಒಂದು ಮೋಟಾರಿನಿಂದ ನೀರು ಹರಿಸಲು ಆರಂಭಿಸಲಾಗಿದೆ. ಶನಿವಾರ ಇನ್ನೊಂದು ಮೋಟಾರ ಆರಂಭಿಸಲಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಎಲ್ಲ ಮೋಟಾರು ಆರಂಭಿಸಿ ಕರೆಗಳಿಗೆ ನೀರು ಹರಿಸುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಾನೆ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯೆ ನೀಡಿದ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಬಾಳಂಬೀಡ ಏತ ನೀರಾವರಿ ಯೋಜನೆ ನೀರು ಹರಿಸಲು ವಿಳಂಬವಾದುದಕ್ಕೆ ಕಾರಣ ಹುಡುಕುತ್ತಿದ್ದೇವೆ. ಸದ್ಯ ನೀರು ಹರಿಸುವ ಕಾರ್ಯ ನಡೆಯಬೇಕಾಗಿದ್ದರಿಂದ ಅದಕ್ಕೆ ಮಹತ್ವ ನೀಡಲಾಗಿದೆ. ವಿದ್ಯುತ್ ಅವಗಡಕ್ಕೆ ಕಾರಣ ತಿಳಿದು, ಇದು ನೌಕರರ ನಿರ್ಲಕ್ಷ್ಯದಿಂದಲೇ ಆಗಿದ್ದರೆ ಖಂಡಿತ ಅಂತಹವರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಇದು ಆಕಸ್ಮಿಕ ಘಟನೆಯಾಗಿದೆ ಎಂದು ತಿಳಿದಿದೆ. ಆದರೂ ಈ ಘಟನೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಬಸಾಪುರ ಏತ ನೀರಾವರಿಗೆ ಸಂಬಂಧಿಸಿದ ಟಿಸಿಯಲ್ಲಿನ ಆಯಿಲ್ ಹಾಗೂ ತಾಮ್ರದ ತಂತಿ ಕಳ್ಳತನವಾಗಿ ಈಗ ಅಲ್ಲಿಂದ ನೀರು ಹರಿಸಲು ಆಗುತ್ತಿಲ್ಲ. ಈಗ ಈ ಟಿಸಿ ಸಿದ್ಧಪಡಿಸಲು ೪೦ ಲಕ್ಷ ರು. ಬೇಕಾಗುತ್ತಿದೆ. ಅದು ಸಿದ್ಧವಾಗಲು ೨೦ ದಿನ ಬೇಕು ಎನ್ನುತ್ತಿದ್ದಾರೆ. ಆದರೆ ಸದ್ಯಕ್ಕೆ ಬಾಡಿಗೆ ಟಿಸಿ ಸಿಗಬಹುದೇ ಎಂದು ಹುಡುಕುತ್ತಿದ್ದೇವೆ. ಅದಷ್ಟು ಬೇಗ ಬಸಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಾನೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹದಗೆಟ್ಟ ಭಟ್ಕಳ ಸರ್ಕಾರಿ ಆಸ್ಪತ್ರೆ ರಸ್ತೆ, ಗಿಡ ನೆಟ್ಟು ಪ್ರತಿಭಟನೆ
ಹುಲಿ ಗಣತಿ ಕ್ಯಾಮೆರಾ ಕಳ್ಳನ ಬಂಧನ, ಎರಡು ಕ್ಯಾಮೆರಾ ವಶ