ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಲಿಂಗಾನುಪಾತದ ಪ್ರಮಾಣವನ್ನು ಸಮತೋಲನಕ್ಕೆ ತರಲು ಜಿಲ್ಲೆಗೆ ಸಂಪರ್ಕವಿರುವ ಅಂತರ್ ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸಲಹೆ ನೀಡಿದರು.ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ಮತ್ತು ಪಿಸಿಪಿ, ಎನ್ ಡಿಟಿ ನೋಂದಣಿ ಹಾಗೂ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾನುಪಾತದ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. 2022ನೇ ಸಾಲಿನಲ್ಲಿ 1000 ಪುರುಷರಿಗೆ 870 ಮಹಿಳೆಯರಿದ್ದರು. 2023ನೇ ಸಾಲಿನಲ್ಲಿ 936ಕ್ಕೆ ಹೆಚ್ಚಳವಾಗಿದೆ. ಈ ವರ್ಷ 969ಕ್ಕೆ ಹೆಚ್ಚಳ ಮಾಡಿ ಲಿಂಗಾನುಪಾತ ಪ್ರಮಾಣವನ್ನು ತರುವ ಗುರಿಯನ್ನು ಹೊಂದಲಾಗಿದೆ. ಪ್ರತಿ ವರ್ಷ ಲಿಂಗಾನುಪಾತ ಪ್ರಮಾಣವನ್ನು ಸರಿದೂಗಿಸಿ 1000 ಪುರುಷರಿಗೆ 1000 ಮಹಿಳೆಯರು ಇರುವ ಹಾಗೆ ಆರೋಗ್ಯಕರ ಸಮಾಜ ನಿರ್ಮಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಸಾಧನೆ ಮಾಡಲು ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಮನ್ವಯತೆಯಲ್ಲಿ ಹಲವು ಯುಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಕೇಂದ್ರಗಳ ಮಾಲೀಕರು, ಮುಖ್ಯಸ್ಥರು, ರೇಡಿಯಾಲಜಿಸ್ಟ್ ತಜ್ಞರಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಜಿಲ್ಲೆಗೆ ಹೊಂದಿಕೊಂಡಿರುವ ಅಂತರ್ ರಾಜ್ಯ ಗಡಿ ಪ್ರದೇಶಗಳಾದ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಮತ್ತು ಚಿಂತಾಮಣಿ ತಾಲೂಕುಗಳಲ್ಲಿನ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ನಿಗಾ ವಹಿಸಬೇಕು. 12ನೇ ವಾರದ ನಂತರದಲ್ಲಿ ಆಗುವ ಗರ್ಭಪಾತಗಳ ಬಗ್ಗೆ ಅನುಸರಣೆ ಮಾಡಿ ಪರಿಶೀಲಿಸಬೇಕು. ಸಂಶಯವಿದ್ದಲ್ಲಿ ತನಿಖೆ ನಡೆಸಬೇಕು. ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಲಿಂಗ ಪತ್ತೆ ಕೇಂದ್ರಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ನಕಲಿ ವೈದ್ಯರು, ನಕಲಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಆಸ್ಪತ್ರೆಗಳ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬಿಲಿಷ್ ಮೆಂಟ್(ಕೆಪಿಎಂಇ) ಅಧಿನಿಯಮದಡಿ ಜಿಲ್ಲೆಯಲ್ಲಿ 251 ಸಂಸ್ಥೆಗಳು ನೋಂದಣಿಯಾಗಿವೆ. ಆ ಸಂಸ್ಥೆಗಳಲ್ಲಿನ ಚಿಕಿತ್ಸಾ ಪದ್ಧತಿಗೆ ಅನುಗುಣವಾಗಿ ನಾಮಫಲಕವನ್ನು ಅಳವಡಿಸಬೇಕು. ಚಿಕಿತ್ಸಾ ದರಪಟ್ಟಿಗಳನ್ನು ತಜ್ಞ ವೈದ್ಯರ ವಿವರವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು, ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ,ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು , ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.