ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರಿದ್ರ ಮಳೆಯ ಆರ್ಭಟದಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅದರಂತೆ ನಗರದ ಕೋರ್ಪಳಯ್ಯ ಛತ್ರ ಹಿಂಭಾಗದಲ್ಲಿರುವ ನದಿಯ ಮಂಟಪ ಬಹುತೇಕ ಮುಳುಗಿದೆ. ಬುಧವಾರ ತುಂಗಾ ಜಲಾಶಯಕ್ಕೆ12 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಗುರುವಾರ ರಾತ್ರಿಯ ಹೊತ್ತಿಗೆ 18,412 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ತುಂಗೆ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.
ಸಾಗರದಲ್ಲಿ 111 ಮಿ.ಮೀ ಮಳೆ ದಾಖಲು:ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 116.37 ಮಿ.ಮೀ ಮಳೆ ದಾಖಲಾಗಿದೆ. ಸಾಗರದಲ್ಲಿ 111 ಮಿ.ಮೀ, ಹೊಸನಗರ ತಾಲೂಕಿನಲ್ಲಿ 100 ಮಿ.ಮೀ, ತೀರ್ಥಹಳ್ಳಿ 100, ಸೊರಬ 34, ಶಿಕಾರಿಪುರದಲ್ಲಿ 18, ಶಿವಮೊಗ್ಗದಲ್ಲಿ 19, ಭದ್ರಾವತಿಯಲ್ಲಿ 9 ಮಿ.ಮೀ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ನದಿ ಪಾತ್ರದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಮೂರು ಅಡಿಯಷ್ಟು ಹೆಚ್ಚಳಗೊಂಡಿದೆ.
ಭದ್ರ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದು, ಇನ್ನೂ ಜು.1ರಂದು 124.7 ಅಡಿಗೆ ಇದ್ದ ನೀರಿನ ಪ್ರಮಾಣ ಜು.4ಕ್ಕೆ 127 ಅಡಿಗೆ ಏರಿಕೆಯಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನೀರಿನ ಮಟ್ಟ 165 ಅಡಿಗೆ ಹೆಚ್ಚಳವಾಗಬೇಕಿದೆ. ಮಳೆ ಇದೇ ರೀತಿ ಮುಂದುವರೆದರೆ ಜಲಾಶಯ ಮಟ್ಟ ಇನ್ನಷ್ಟು ಏರಿಕೆಯಾಗಲಿದೆ.
ಲಿಂಗನಮಕ್ಕಿ ಹಿನ್ನೀರು ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಒಂದೇ ದಿನ ಲಿಂಗನಮಕ್ಕಿ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯಕ್ಕೆ ಜು.3ರಂದು 19,950 ಕ್ಯುಸೆಕ್ ನೀರು ಬಂದಿದ್ದು, ಜಲಾಶಯ ಮಟ್ಟ 1754.95 ಅಡಿಗೆ ತಲುಪಿತ್ತು. ಗುರುವಾರ 60,238 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯ ಮಟ್ಟ 1760.10 ಅಡಿಗೆ ತಲುಪಿದೆ.ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ