ಮಗುವಿನ ಆರೋಗ್ಯಕರ ಜೀವನಕ್ಕೆ ಸಮತೋಲನ ಆಹಾರ ಮುಖ್ಯ: ನ್ಯಾ.ಬಿ.ಪಾರ್ವತಮ್ಮ

KannadaprabhaNewsNetwork |  
Published : Sep 30, 2025, 12:00 AM IST
29ಕೆಎಂಎನ್ ಡಿ19 | Kannada Prabha

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರು ಬೇರೆ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ತನ್ನ ತಾಯಿಯನ್ನು ಮೊದಲು ಅಮ್ಮ ಎಂದರೆ ನಂತರ ಸ್ಥಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಅಮ್ಮ ಎಂದು ಕರೆಯುತ್ತಾರೆ. ಅವರೇ ಮೊದಲ ಅಕ್ಷರಾಭ್ಯಾಸದ ಗುರು ಆಗಿರುತ್ತಾರೆ ಎಂಬುದು ನನಗೆ ಹೆಮ್ಮೆ ತರುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಗುವಿನ ಆರೋಗ್ಯಕರ ಜೀವನಕ್ಕೆ ಸಮತೋಲನ ಆಹಾರ ಮುಖ್ಯ ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಬಿ.ಪಾರ್ವತಮ್ಮ ಹೇಳಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಬೇರೆ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ತನ್ನ ತಾಯಿಯನ್ನು ಮೊದಲು ಅಮ್ಮ ಎಂದರೆ ನಂತರ ಸ್ಥಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಅಮ್ಮ ಎಂದು ಕರೆಯುತ್ತಾರೆ. ಅವರೇ ಮೊದಲ ಅಕ್ಷರಾಭ್ಯಾಸದ ಗುರು ಆಗಿರುತ್ತಾರೆ ಎಂಬುದು ನನಗೆ ಹೆಮ್ಮೆ ತರುತ್ತದೆ ಎಂದರು.

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದನ್ನು ತಾಯಿಯಾದವರು ಗರ್ಭಾವಸ್ಥೆಯಿಂದಲೇ ಪ್ರಾರಂಭಿಸಬೇಕು. ಮ್ಯಾಗಿ, ಕರಿದ ಪದಾರ್ಥಗಳು, ಮೈದಾ, ಸಕ್ಕರೆ, ಉಪ್ಪು ಅತಿಯಾಗಿ ಮಿಶ್ರಣಗೊಂಡ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದನ್ನು ಪೋಷಕರು ತಪ್ಪಿಸಬೇಕು ಎಂದರು.

ಪೋಷಕರಾದವರು ಮಕ್ಕಳ ಬಗ್ಗೆ ಗಮನ ಹರಿಸಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಅವರ ಜೀವನವನ್ನೇ ಹಾಳು ಮಾಡುತ್ತದೆ. ಚಿಕ್ಕ ಮಕ್ಕಳಿಗೆ ವಾಹನವನ್ನು ಕೊಡಬಾರದು. ಇದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ ಹಾಗೂ ಕಠಿಣ ಕ್ರಮದ ಜೊತೆಗೆ 25000 ದಂಡ ವಿಧಿಸುತ್ತಾರೆ ಎಂದು ಎಚ್ಚರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಆರ್.ಪೂರ್ಣಿಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲೇ ಬಿಪಿ, ಶುಗರ್, ಹೃದಯಾಘಾತ, ಕ್ಯಾನ್ಸರ್ ರೋಗಗಳು ಹೆಚ್ಚಾಗಿ ಕಾಣಿಸುತ್ತಿವೆ. ಇದಕ್ಕೆ ಮೂಲ ಕಾರಣ ಅಸಮತೋಲನ ಆಹಾರ ಪದ್ಧತಿ. ಇದನ್ನು ತಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಕಳೆದ ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ 1000 ಗಂಡು ಮಕ್ಕಳು ಹಾಗೂ 1025 ಹೆಣ್ಣು ಮಕ್ಕಳು ಜನಿಸಿದ್ದು, ಹೆಣ್ಣುಮಕ್ಕಳ ಜನನ ಹೆಚ್ಚಿರುವುದು ಸಂತಸದ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 5 ಜನ ಗರ್ಭಿಣಿಯರಿಗೆ ನ್ಯಾಯಾಧೀಶರು ಹಾಗೂ ವಕೀಲರಿಂದ ಮಡಿಲುತುಂಬಿ ಬಾಗಿನ ಸಮರ್ಪಣೆ ನಡೆಯಿತು, ಕೆಲ ಶಿಶುಗಳಿಗೆ ಪೌಷ್ಟಿಕ ಆಹಾರ ತಿನಿಸಿ ಅಕ್ಷರಾಭ್ಯಾಸ ಆರಂಭ ಮಾಡಲಾಯಿತು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮೋಹನ್ ಕುಮಾರ್, ಮೈನಾವತಿ, ಪುಷ್ಪಲತಾ, ವರಲಕ್ಷ್ಮಿ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ