ಬೆಳೆಗಳಲ್ಲಿ ಸಮತೋಲಿತ ಪೋಷಕಾಂಶ ನಿರ್ವಹಣೆಗೆ ಆದ್ಯತೆ ನೀಡಲಿ: ನಾಗರಾಜ ಕಾತರಕಿ

KannadaprabhaNewsNetwork |  
Published : Jun 14, 2026, 02:30 AM IST
ಹನುಮಸಾಗರ ಸುತ್ತಮುತ್ತಲಿನ ವಿವಿಧ ರಸಗೊಬ್ಬರ ಮಳಿಗೆಗಳ ಮುಂಭಾಗದಲ್ಲಿ ಕೃಷಿ ಇಲಾಖೆಯಿಂದ ಕರಪತ್ರಗಳ ಮೂಲಕ ರೈತರಿಗೆ ವಿಶೇಷ ಜಾಗೃತಿ ಮೂಡಿಸಲಾಯಿತು. | Kannada Prabha

ಸಾರಾಂಶ

ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಹದಗೆಡುವುದರ ಜೊತೆಗೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಕಾತರಕಿ ಹೇಳಿದರು.

ಹನುಮಸಾಗರ: ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಹದಗೆಡುವುದರ ಜೊತೆಗೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಕಾತರಕಿ ಹೇಳಿದರು.

ಪಟ್ಟಣದ ಸುತ್ತಮುತ್ತಲಿನ ವಿವಿಧ ರಸಗೊಬ್ಬರ ಮಳಿಗೆಗಳ ಮುಂಭಾಗದಲ್ಲಿ ಕೃಷಿ ಇಲಾಖೆಯಿಂದ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಬೆಳೆಗಳಲ್ಲಿ ಸಮತೋಲಿತ ಪೋಷಕಾಂಶ ನಿರ್ವಹಣೆಗೆ ಆದ್ಯತೆ ನೀಡಬೇಕು. ಯೂರಿಯಾ ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಹೊಂದಿರಬೇಕು. ರೈತರಿಗೆ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ (ಡೈ ಅಮೋನಿಯಂ ಫಾಸ್ಫೇಟ್) ಬಳಕೆಯ ಮಹತ್ವ, ಅವುಗಳ ಪ್ರಯೋಜನಗಳು ಹಾಗೂ ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಅವುಗಳನ್ನು ಸಮರ್ಪಕವಾಗಿ ಬಳಸುವ ವಿಧಾನಗಳ ಕುರಿತು ಕರಪತ್ರಗಳು ಮತ್ತು ಮಾಹಿತಿ ಪೋಸ್ಟರ್‌ಗಳ ಮೂಲಕ ವಿವರಿಸಲಾಯಿತು.

ಕೃಷಿ ಅಧಿಕಾರಿ ಆಕಾಶ ದಾನಿ ಮಾತನಾಡಿ, ಅತಿಯಾದ ಯೂರಿಯಾ ಬಳಕೆಯಿಂದ ಬೆಳೆಗಳು ಕೀಟ ಹಾಗೂ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಮಣ್ಣಿನ ಪರೀಕ್ಷೆಯ ವರದಿಯ ಆಧಾರದ ಮೇಲೆ ಮಾತ್ರ ಗೊಬ್ಬರ ಬಳಕೆ ಮಾಡಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯಿಂದ ಗೊಬ್ಬರದ ಬಳಕೆ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಪೋಷಕಾಂಶಗಳ ಪರಿಣಾಮಕಾರಿ ಹೀರಿಕೊಳ್ಳುವಿಕೆ ಸಾಧ್ಯವಾಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಉತ್ತಮಗೊಳ್ಳುವುದರೊಂದಿಗೆ ಉತ್ಪಾದನಾ ವೆಚ್ಚ ತಗ್ಗಿ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದರು.

ವಿಎಸ್ಎಸ್ಎನ್ ವ್ಯವಸ್ಥಾಪಕ ಸುರೇಶ ಪಟ್ಟೇದ ಮಾತನಾಡಿ, ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ಕೃಷಿ ಇಲಾಖೆ ನೀಡುವ ಸಲಹೆಗಳನ್ನು ಅನುಸರಿಸಿ ಸಮತೋಲಿತ ಗೊಬ್ಬರ ಬಳಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಅರಿವು ಕಾರ್ಯಕ್ರಮದಲ್ಲಿ ರೈತರಿಗೆ ಸಂಯುಕ್ತ ರಸಗೊಬ್ಬರಗಳ ಮಹತ್ವ, ಬೆಳೆಗಳಿಗೆ ಅಗತ್ಯವಾದ ಸಾರಜನಕ, ರಂಜಕ ಹಾಗೂ ಪೊಟ್ಯಾಶ್ ಅಂಶಗಳ ಸಮರ್ಪಕ ಪೂರೈಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳ ಬಳಕೆಯ ಅಗತ್ಯತೆಯ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

ಹನುಮಸಾಗರ ವ್ಯಾಪ್ತಿಯ ವಿವಿಧ ರಸಗೊಬ್ಬರ ಮಳಿಗೆಗಳ ಕಾರ್ಯನಿರ್ವಾಹಕರು, ಸದಸ್ಯರು, ರೈತರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ರೈತರು ಅಧಿಕಾರಿಗಳಿಂದ ತಮ್ಮ ಬೆಳೆಗಳಿಗೆ ಸಂಬಂಧಿಸಿದ ಗೊಬ್ಬರ ಬಳಕೆ ಹಾಗೂ ಪೋಷಕಾಂಶ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ
ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿ ದೂರವಿಡಲು ಸಾಧ್ಯ