ಕನ್ನಡಪ್ರಭ ವಾರ್ತೆ ಯಲ್ಲಾಪುರ
ಸ್ವಾತಂತ್ರ್ಯಾ ನಂತರ ದೇಶದಲ್ಲಿ ಅಸಂಖ್ಯಾತ ಸಾಮಾಜಿಕ ಸ್ವರೂಪದ ಮಹತ್ತರ ಬದಲಾವಣೆಗಳಾದವು. ಇದೇ ಸಂದರ್ಭದಲ್ಲಿ ದೇಶದ ವನವಾಸಿಗಳ ಬದುಕಿನ ಕಷ್ಟ-ನಷ್ಟಗಳ ಸುಧಾರಣೆಗೆಂದು ಬಾಳಾಸಾಹೇಬ ದೇಶಪಾಂಡೆ ಇಡೀ ರಾಷ್ಟ್ರವನ್ನು ಸುತ್ತಿ ಸಮೀಕ್ಷೆ ನಡೆಸಿ, ಈ ನಿಟ್ಟಿನಲ್ಲಿ ನೆರವಾಗಲು ವನವಾಸಿ ಕಲ್ಯಾಣಾಶ್ರಮವನ್ನು ಅನೇಕ ಹಿರಿಕಿರಿಯರ ಸಹಕಾರದೊಂದಿಗೆ ಆರಂಭಿಸಿದರು ಎಂದು ವನವಾಸಿ ಕಲ್ಯಾಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶಿವರಾಮಕೃಷ್ಣ ಹೇಳಿದರು.ಶನಿವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ವನವಾಸಿ ಕಲ್ಯಾಣ (ಕರ್ನಾಟಕ)ದ ೨೦೨೪ನೇ ಸಾಲಿನ ೫ ದಿನಗಳ ಪ್ರಾಂತ ಆಚಾರ್ಯರ ಅಭ್ಯಾಸವರ್ಗದ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದರು.
ವನವಾಸಿಗಳ ಸರ್ವಾಂಗೀಣ ವಿಕಾಸದ ಗುರಿ ಹೊಂದಿ, ದಾಪುಗಾಲಿಟ್ಟು ನಡೆಯುತ್ತಿರುವ ವನವಾಸಿ ಕಲ್ಯಾಣ ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೪೦೦೦ ಮನೆ ಪಾಠಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದರು.ರಾಜ್ಯದ ೧೬ ಜಿಲ್ಲೆಗಳ ಸುಮಾರು ೨೫೦ಕ್ಕಿಂತ ಅಧಿಕ ಸಂಖ್ಯೆಯ ಶಿಬಿರಾರ್ಥಿಗಳು ಪಾಲ್ಗೊಂಡ ಈ ಕಾರ್ಯಾಗಾರದ ಅತಿಥಿಗಳಾಗಿದ್ದ ಯಲ್ಲಾಪುರದ ಡಿ.ಸಿ.ಎಫ್. ಹರ್ಷಾಬಾನು ಮಾತನಾಡಿ, ಸಮಾಜದಲ್ಲಿ ಹಿಂದುಳಿದಿರುವ ವನವಾಸಿಗಳಿಗೆ ಅಗತ್ಯವಿರುವ ವಿವೇಕ ಮತ್ತು ವಿಕಾಸವನ್ನು ನೀಡುವುದೇ ವನವಾಸಿ ಕಲ್ಯಾಣದ ಪ್ರಮುಖ ಉದ್ದೇಶವಾಗಿದೆ. ಇಂತಹ ಹಿಂದುಳಿದ ಸಮುದಾಯದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸಂಘಟನೆಯ ಮಹತ್ವಾಕಾಂಕ್ಷೆಯಾಗಿದೆ. ಸಮಾಜದಲ್ಲಿ ಸಹಿಷ್ಣುತೆಯ ಕೊರತೆ ಅಪಾಯವನ್ನು ತಂದೊಡ್ಡಿರುವ ಪ್ರಸ್ತುತ ಸನ್ನಿವೇಶದಲ್ಲಿ ವನವಾಸಿಗಳು ವಿದ್ಯೆಯೊಂದಿಗೆ ನಿರಂತರ ವಿನಯವೂ ಇರಬೇಕೆಂಬ ಮಹತ್ವವನ್ನು ಅರಿತುಕೊಂಡಿರಬೇಕು ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ನನ್ನನ್ನೂ ಸೇರಿದಂತೆ ನನ್ನಂತಹ ಸಾಮಾಜಿಕ ಕಳಕಳಿಯ ವ್ಯಕ್ತಿಗಳಿಗೆ ವನವಾಸಿ ಕಲ್ಯಾಣವೇ ಪ್ರೇರಣೆಯಾಗಿದ್ದು, ರಾಜ್ಯದಲ್ಲಿ ಸಂಘಟನೆಯನ್ನು ಆರಂಭಿಸಿ, ಗಟ್ಟಿಗೊಳಿಸಿದ ಪ್ರಕಾಶ ಕಾಮತ್ ನಮ್ಮೆಲ್ಲರಿಗೂ ಸ್ಮರಣೀಯರು ಎಂದರು.ಇಂದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಸಂಘಟನೆ ಹೊಂದಿರುವ ವನವಾಸಿ ಕಲ್ಯಾಣ ಸಮುದಾಯದ ಜನರಿಗೆ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಸಾಮಾಜಿಕ ಲೇಪನದೊಂದಿಗೆ ನೀಡುವ ಉದ್ದೇಶ ಹೊಂದಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ವನವಾಸಿ ಪ್ರಸೂತಿ ತಜ್ಞೆ, ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ಸಿದ್ದಿ ಮಾಗೋಡು ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿ, ವನವಾಸಿಗಳು ತಮ್ಮ ಸಮುದಾಯದ ಜನರಿಗೆ ಸ್ವಚ್ಚತೆ ಮತ್ತು ಶಿಕ್ಷಣ ನೀಡಬೇಕು. ಜಾತಿ, ಮತ ಬೇಧವೆಣಿಸದೇ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಕಾರಣರಾಗಬೇಕು ಎಂದರು.ಅತಿಥಿಗಳಾಗಿದ್ದ ಡಾ. ಸುಚೇತಾ ಮದ್ಗುಣಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವನವಾಸಿ ಕಲ್ಯಾಣದ ಶಿರಸಿ ಜಿಲ್ಲಾಧ್ಯಕ್ಷ ನಾರಾಯಣ ಮರಾಠಿ ಮಾತನಾಡಿ, ಇಂದಿನ ಕಾರ್ಯಾಗಾರ ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡುವ ನಿಟ್ಟಿನಲ್ಲಿ ದೇವರೇ ನೀಡಿದ ಸದಾವಕಾಶವಾಗಿದೆ. ಇದನ್ನರಿತು ನಾವೆಲ್ಲರೂ ಸಾಧ್ಯವಿದ್ದಷ್ಟು ಸಾಮಾಜಿಕ ಕೊಡುಗೆಗಳನ್ನು ನೀಡಬೇಕು. ಇದಕ್ಕೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಪೇಕ್ಷಣೀಯ ಎಂದರು.
ವೀಣಾ ಸಿದ್ದಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಾಗಾರದಲ್ಲಿ ಮಹೇಶ ಗುಂಡ್ಲಪೇಟೆ ನಿರ್ವಹಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಮುರಳಿ ಹೆಗಡೆ ಸ್ವಾಗತಿಸಿದರು. ಪ್ರಾಂತ ಶಿಕ್ಷಣ ಪ್ರಮುಖ ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಶಿರಸಿ ಜಿಲ್ಲಾ ಶಿಕ್ಷಣ ಪ್ರಮುಖ ಭಾಗು ಕಾತ್ರಾಟ್ ವಂದಿಸಿದರು. ವನವಾಸಿ ಕಲ್ಯಾಣದ ಪ್ರಮುಖರಾದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರವೀಂದ್ರ ಯಡಳ್ಳಿ, ಬೊಮ್ಮು ಕೊಕ್ರೆ, ನಾರಾಯಣ ಕುಣಬಿ ಸೇರಿದಂತೆ ಅನೇಕ ಪ್ರಮುಖರು ವೇದಿಕೆಯಲ್ಲಿದ್ದರು.