ಕೊಪ್ಪಳ: ಬಲ್ಡೋಟಾ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಶ್ಲಾಘನೀಯ ಕೊಡುಗೆ ನೀಡಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದ್ದಾರೆ.
ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್,ಪೀಠೋಪಕರಣ, ಆಟೋಪಕರಣ ಸೇರಿದಂತೆ ಹಲವು ಸೌಲಭ್ಯ ಒದಗಿಸಿರುವ ಸಂಸ್ಥೆಯು ಇದೀಗ ಬಸಾಪುರ ಶಾಲೆಗೆ ಎರಡು ಕೊಠಡಿ ನಿರ್ಮಿಸಿ ಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರ ಶಿಕ್ಷಣ ಇಲಾಖೆಯೊಂದಿಗೆ ಮುಂದುವರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಲ್ಡೋಟ ಸಮೂಹದ ಸಿಸಿ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಭುದೇವಪ್ಪ ಮಾತನಾಡಿ, ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಉತ್ತಮ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಾರೆ. ಆದರೆ ಉನ್ನತ ತಾಂತ್ರಿಕ ವಿದ್ಯಾಭ್ಯಾಸ ಪಡೆದ ಯುವಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಲಭ್ಯವಿಲ್ಲದಿದ್ದರೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಬಲ್ಡೋಟದಂತಹ ಪರಿಸರ ಸ್ನೇಹಿ ಕೈಗಾರಿಕೆಗಳು ಈ ಭಾಗದಲ್ಲಿ ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯವಾಗುವುದರ ಜತೆಗೆ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಪರಿಸರ ಮತ್ತು ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಅನೇಕ ಜನಪರ ಯೋಜನೆಗಳು ರೂಪುಗೊಳ್ಳಲಿವೆ ಎಂದು ಹೇಳಿದರು.ಸಂಸ್ಥೆಯ ಸಾಮಾಜಿಕ ಸೇವಾ ವಿಭಾಗದ ಮುಖ್ಯಸ್ಥ ಎಚ್.ಕೆ. ರಮೇಶ್ ಮಾತನಾಡಿ, ಈಗಾಗಲೇ ಗ್ರಾಮದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿಯೂ ಗ್ರಾಮಸ್ಥರ ಸಹಕಾರದಿಂದ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ, ಸದಸ್ಯ ಗ್ಯಾನಪ್ಪ ತಳಕಲ್ ಸೇರಿದಂತೆ ಇತರರು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಪುಂಡಲೀಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.