ಕುಷ್ಟಗಿ: ಸ್ವಂತ ಮನೆಯಂತೆ ಸುತ್ತಮುತ್ತಲಿನ ಜಾಗಗಳಾದ ಉದ್ಯಾನ,ರಸ್ತೆ ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.
ನಮ್ಮ ಜಾಗದ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಶುದ್ಧವಾಗಿಟ್ಟುಕೊಳ್ಳಬೇಕು, ಅಂದಾಗ ನಮ್ಮ ಮನೆಯಲ್ಲಿನ ಕುಟುಂಬಸ್ಥರು ಆರೋಗ್ಯವಂತರಾಗಿರಲು ಸಾಧ್ಯವಾಗಲಿದೆ ಎಂದರು.
ಸರ್ಕಾರಿ ಜಾಗವೆಂದು ಕಡೆಗಣಿಸದೆ ನಮ್ಮ ಆರೋಗ್ಯ ಸುಧಾರಣೆಗಾದರೂ ಸುತ್ತಮುತ್ತಲಿನ ಜಾಗ ಸ್ವಚ್ಚತೆಯಿಂದ ಇಟ್ಟುಕೊಳ್ಳುವದರ ಜತೆಗೆ ಈ ಉದ್ಯಾನವನ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ಈಗಾಗಲೆ ಪುರಸಭೆಯವರಿಗೆ ತಿಳಿಸಲಾಗಿದೆ. ಎಲ್ಲ ಜಾಗ ಪೌರ ಕಾರ್ಮಿಕರು ಬಂದು ಸ್ವಚ್ಛ ಮಾಡುವದು ಆಗುವುದಿಲ್ಲ ಅವರೊಂದಿಗೆ ನಿವಾಸಿಗಳು ಕೈ ಜೋಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಮಾತನಾಡಿ, ನಮ್ಮ ಮನಸ್ಸಿನಂತೆ ಸುತ್ತಮುತ್ತಲಿನ ಜಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದಿದ್ದರೆ ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡಿ ಮನುಷ್ಯನ ಸ್ವಾಸ್ಥ್ಯ ಹಾಳು ಮಾಡುತ್ತವೆ. ಸುಂದರ ಪರಿಸರದಿಂದ ವ್ಯಕ್ತಿಯ ಆರೋಗ್ಯ ಜತೆಗೆ ಸಕಾರಾತ್ಮಕ ಆಲೋಚನೆ ಬೆಳೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಆರೋಗ್ಯ ನಿರೀಕ್ಷಕ ಪ್ರಾಣೇಶ, ಎಂ.ಶಪಿ ಹೇರೂರ್, ಎನ್.ಆರ್.ಸೂಡಿ, ಪಂಪಾಪತಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಸುನೀಲ ಮಠದ ಮತ್ತು ಆಕಾಶ ಸಂಗನಾಳ ಸೇರಿದಂತೆ ವಿದ್ಯಾನಗರದ ಸ್ಥಳೀಯ ನಿವಾಸಿಗಳು ಮತ್ತು ಪುರಸಭೆಯ ಪೌರಕಾರ್ಮಿಕರು ಇತರರು ಇದ್ದರು.