ಬಲಿಗಾಗಿ ಕಾಯುತ್ತಿರುವ ಬಾಲೆಹೊಸೂರಿನ ರಸ್ತೆ

KannadaprabhaNewsNetwork |  
Published : Aug 12, 2025, 12:30 AM IST
ಪೊಟೋ-ಸೂರಣಗಿ ಗ್ರಾಮದಿಂದ ಬಾಲೆಹೊಸೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಸರು ಗದ್ದೆಯಂತಾದ ರಸ್ತೆಯ ನೋಟ. | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನ ಕೊನೆಯ ಗ್ರಾಮ ಬಾಲೆಹೊಸೂರ ಗ್ರಾಮಕ್ಕೆ ಸೂರಣಗಿ ಮಾರ್ಗವಾಗಿ ಹೋಗುವುದೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣ ಮಾಡಿದಂತೆ. ಕಂಬಳದ ಗದ್ದೆಯನ್ನು ಕೆಸರುಮಯ ಮಾಡಿ ಕೋಣ ಓಡಿಸಿದಂತೆ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಕ್ಕೂ ಸಮನಾಗಿದೆ. ಅಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆ ರಸ್ತೆ.

ಅಶೋಕ ಸೊರಟೂರ

ಲಕ್ಷ್ಮೇಶ್ವರ: ತಾಲೂಕಿನ ಕೊನೆಯ ಗ್ರಾಮ ಬಾಲೆಹೊಸೂರ ಗ್ರಾಮಕ್ಕೆ ಸೂರಣಗಿ ಮಾರ್ಗವಾಗಿ ಹೋಗುವುದೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣ ಮಾಡಿದಂತೆ. ಕಂಬಳದ ಗದ್ದೆಯನ್ನು ಕೆಸರುಮಯ ಮಾಡಿ ಕೋಣ ಓಡಿಸಿದಂತೆ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಕ್ಕೂ ಸಮನಾಗಿದೆ. ಅಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆ ರಸ್ತೆ.

ಸೂರಣಗಿಯಿಂದ ಬಾಲೆಹೊಸೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಸೇರಿದ 10 ಕಿಮೀ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿ ದಶಕಗಳೆ ಕಳೆದಿವೆ. ಹಿಡಿ ಮಣ್ಣು ರಸ್ತೆಗೆ ಬಿದ್ದಿಲ್ಲವೆಂಬುದು ನೋವಿನ ಸಂಗತಿಯಾಗಿದೆ.

ಪ್ರತಿನಿತ್ಯ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೂರಣಗಿ ಮಾರ್ಗವಾಗಿ ಕೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡುತ್ತಾರೆ. ಇದು ರಸ್ತೆಯೋ ಕೆಸರು ಗದ್ದೆಯೋ ಎಂಬ ಸ್ಥಿತಿಗೆ ಈ ರಸ್ತೆ ತಲುಪಿದೆ. ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಸಾರಿಗೆ ಸಂಸ್ಥೆಯ ಬಸ್ಸುಗಳು ಇಲ್ಲಿ ಜಾರು ಗುಂಡಿ ಆಟವಾಡುತ್ತ ಸರ್ಕಸ್ ಮಾಡುತ್ತ ಸಾಗುತ್ತಿವೆ. ಬೈಕ್ ಸವಾರರು ಈ ರಸ್ತೆಯ ಸಹವಾಸ ಬೇಡ ಎನ್ನುವ ಹಂತಕ್ಕೆ ತಲುಪಿದ್ದಾರೆ. ಆಟೋ, ಟಂಟಂ ಹಾಗೂ ಟ್ರಕ್ ಚಾಲಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗೆಳಿಗೆ ಹಿಡಿಶಾಪ ಹಾಕುತ್ತ ಸಾಗುವ ಕರ್ಮ ಮಾಡುತ್ತಿದ್ದಾರೆ.

ಈ ರಸ್ತೆಯು ಸುಧಾರಣೆಗೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಬಾಲೆಹೊಸೂರ ಗ್ರಾಮಸ್ಥರು ಯಾವ ಪಾಪ ಮಾಡಿದ್ದಾರೋ ತಿಳಿಯುತ್ತಿಲ್ಲ.

ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯತನಕ್ಕೆ ಇಲ್ಲಿ ಸಾಕ್ಷಾತ್‌ ದರ್ಶನವಾಗುತ್ತದೆ. ಸೂರಣಗಿ ಗ್ರಾಮದಿಂದ ಬಾಲೆಹೊಸೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುವಂತೆ ಕಳೆದ 8-10 ವರ್ಷಗಳಿಂದ ಈ ರಸ್ತೆ ಸುಧಾರಣೆ ಮಾಡುವಂತೆ ಮನವಿ ಸಲ್ಲಿಸಿ ಹೋರಾಟ ಮಾಡುತ್ತ ಬಂದಿದ್ದರೂ ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲವೆಂಬುದು ನೋವಿನ ಸಂಗತಿಯಾಗಿದೆ. ಕಳೆದ 3 ವರ್ಷಗಳ ಹಿಂದೆ ನಾವೆ ರಸ್ತೆಗೆ ಮಣ್ಣು ಕಡಿ ಹಾಕಿ ಜೆಸಿಬಿ ಬಳಸಿ ಸುಧಾರಣೆ ಮಾಡಿದ್ದೇವೆ. ನಮಗೆ ಲೋಕೋಪಯೋಗಿ ಇಲಾಖೆ ಜೀವಂತವಾಗಿದೆಯೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ ಎಂದು ಬಾಲೆಹೊಸೂರ ಗ್ರಾಮಸ್ಥ ಸುರೇಶ ಹಾವನೂರ ಹೇಳಿದರು.ಸೂರಣಗಿ- ಬಾಲೆಹೊಸೂರ ಗ್ರಾಮದ ರಸ್ತೆ ಸುಧಾರಣೆಗೆ ಸುಮಾರು ₹7 ಕೋಟಿ ಹಣ ಬಿಡುಗಡೆಯಾಗಿದೆ. ಈಗ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಲೊಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪುರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!