ಬ್ರಹ್ಮಾವರ: ಇಲ್ಲಿನ ಬಾಳೆಕುದ್ರು ಮಠಾಧೀಶ ಶ್ರೀ ವಾಸುದೇವ ಸದಾಶಿವಶ್ರಮ ಸ್ವಾಮೀಜಿ ಅವರು ಮಠದಿಂದ ಕಾಣೆಯಾಗಿದ್ದು, ಇದರಿಂದ ಆತಂಕಗೊಂಡ ಭಕ್ತರು ಗುರುವಾರ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾಗವತ ಸಂಪ್ರದಾಯಕ್ಕೆ ಸೇರಿರುವ ಶ್ರೀ ಮಠದಲ್ಲಿ ಪೂಜಿಸಲ್ಪಡುತ್ತಿದ್ದ ಸಾವಿರ ವರ್ಷಕ್ಕೂ ಹಳೆಯದೆನ್ನಲಾದ 6 ವಿಗ್ರಹಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗಿದ್ದು, ಈ ಬಗ್ಗೆ ಭಕ್ತರೊಬ್ಬರು ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಬುಧವಾರ ಸಂಜೆ ಮಠಕ್ಕೆ ಬೀಗ ಜಡಿದು, ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ವಿಗ್ರಹಗಳನ್ನು ಸ್ವತಃ ಶ್ರೀಗಳಿಗೂ ಮುಟ್ಟಿ ಪೂಜಿಸುವುದಕ್ಕೆ ಅವಕಾಶ ಇರಲಿಲ್ಲ, ಚಿನ್ನದ ಸಣ್ಣ ಸಲಾಕೆಯಿಂದ ಈ ವಿಗ್ರಹಗಳಿಗೆ ಅಲಂಕಾರ ಇತ್ಯಾದಿ ಮಾಡಲಾಗುತ್ತಿತ್ತು. ಆದರೇ ಕೆಲವು ತಿಂಗಳ ಹಿಂದೆ ಕಾಣೆಯಾಗಿದ್ದಾಗ, ಈಗಿನ ಸ್ವಾಮೀಜಿ ಅವರು ಈ ಹಳೆಯ ಮೂರ್ತಿಗಳನ್ನು ವಿಸರ್ಜನೆ ಮಾಡಿ ಹೊಸ ಮೂರ್ತಿಗಳನ್ನು ನಿರ್ಮಿಸಲಾಗುತ್ತಿರುವುದಾಗಿ ಹೇಳಿದ್ದರು.
ದೇವಾಲಯದಿಂದ ನಾಪತ್ತೆಯಾಗಿದ್ದ ಈ ಸಾವಿರಾರು ವರ್ಷ ಹಳೆಯ ಲೋಹದ ಮೂರ್ತಿಗಳು ಮಾರುಕಟ್ಟೆಯಲ್ಲಿ ಅಪರಿಮಿತ ಬೆಲೆಬಾಳುತ್ತವೆ.ಆದರೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರಾಚ್ಯ ವಸ್ತುಗಳು ಮಾರಾಟ ಮಳಿಗೆಯ ವೆಬ್‌ಸೈಟ್‌ನಲ್ಲಿ ಶ್ರಿಮಠದ 6 ವಿಗ್ರಹಗಳನ್ನು ಮಾರಾಟಕ್ಕಿಟ್ಟಿರುವುದು ಪತ್ತೆಯಾಗಿದ್ದು, ಮಠದ ಭಕ್ತರಾದ ಬೆಂಗಳೂರಿನ ಜಗದೀಶ್ ಐತಾಳ್ ಎಂಬವರು ಬಸವೇಶ್ವರನಗರ ಠಾಣೆಯಲ್ಲಿ ಮಠದ ವಿಗ್ರಹಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರು. ಅದರಂತೆ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದರಿಂದ ಹೆದರಿದ ಶ್ರೀಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ನಾಪತ್ತೆಯಾಗಿರುವ ಬಗ್ಗೆ ಇದೀಗ ಬ್ರಹ್ಮಾವರ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.