ಇಲ್ಲಿನ ಶ್ರೀ ಸೋದೆ ವಾದಿರಾಜ ಮಠದ 2028 - 30ರ ಪರ್ಯಾಯೋತ್ಸವಕ್ಕೆ ಪೂರ್ವಭಾವಿ ನಡೆಯಲಿರುವ ನಾಲ್ಕು ಮುಹೂರ್ತಗಳಲ್ಲಿ ಮೊದಲನೇಯ ಬಾಳೆ ಮುಹೂರ್ತವು ನ. 29ರಂದು ಶ್ರೀ ಮಠದಲ್ಲಿ ನಡೆಯಲಿದೆ.
ಉಡುಪಿ: ಇಲ್ಲಿನ ಶ್ರೀ ಸೋದೆ ವಾದಿರಾಜ ಮಠದ 2028 - 30ರ ಪರ್ಯಾಯೋತ್ಸವಕ್ಕೆ ಪೂರ್ವಭಾವಿ ನಡೆಯಲಿರುವ ನಾಲ್ಕು ಮುಹೂರ್ತಗಳಲ್ಲಿ ಮೊದಲನೇಯ ಬಾಳೆ ಮುಹೂರ್ತವು ನ. 29ರಂದು ಶ್ರೀ ಮಠದಲ್ಲಿ ನಡೆಯಲಿದೆ.
ಕೃಷ್ಣಮಠದಲ್ಲಿ ನಿತ್ಯ ನಡೆಯುವ ಅನ್ನದಾನಕ್ಕೆ ಪೂರಕವಾಗಿ ನಡೆಯುವ ಈ ಮೂಹೂರ್ತವು ಕೇವಲ ಸಾಂಕೇತಿಕವಾಗಿರದೇ, ಪ್ರಾಯೋಗಿಕವಾಗಿರಬೇಕು ಎಂಬ ಉದ್ದೇಶದಿಂದ ನ. 29ರಿಂದ ಡಿ. 1ರವರೆಗೆ ‘ರಾಷ್ಟ್ರಮಟ್ಟದ ಬಾಳೆಮೇಳ - ಕದಳೀ ವಿಶ್ವದರ್ಶನ’ವನ್ನು ಆಯೋಜಿಸಲಾಗಿದೆ.ಈ ಬಗ್ಗೆ ಭಾವಿ ಪರ್ಯಾಯ ಪೀಠಾಧೀಶ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಬಾಳೆ ಕೃಷಿಯ ಮಹತ್ವ ಪರಿಚಯಿಸುವುದು, ಬಾಳೆ ಕೃಷಿಯ ವಿಫುಲ ಅವಕಾಶಗಳ ಜಾಗೃತಿ ಮೂಡಿಸುವುದು, ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಹಾಗೂ ಕೃಷಿ ಆಧಾರಿತ ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಬಾಳೆ ಕೃಷಿಕರ ಜ್ಞಾನವನ್ನು ಪರಸ್ಪರ ವಿನಿಮಯಗೊಳಿಸುವುದು ‘ಕದಳೀ ವಿಶ್ವದರ್ಶನ’ ಮೇಳದ ಪ್ರಮುಖ ಉದ್ದೇಶಗಳಾಗಿವೆ.ಮೂರು ದಿನಗಳ ಈ ಮೇಳದಲ್ಲಿ ಸುಮಾರು 2,000 ರೈತರು ಹಾಗೂ 2,000 ವಿದ್ಯಾರ್ಥಿಗಳು, ಸಂಶೋಧಕರು, ತಜ್ಞರು, ಉದ್ಯಮಿಗಳು ಮತ್ತು 10,000ಕ್ಕೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. 150 ಬಾಳೆತಳಿಗಳ ಪ್ರದರ್ಶನ100ಕ್ಕೂ ಅಧಿಕ ವಿವಿಧ ತಳಿಗಳ ಬಾಳೆ ಹಣ್ಣು ಪ್ರದರ್ಶನ, ಮಾರಾಟ ಹಾಗೂ 150ಕ್ಕೂ ಅಧಿಕ ಬಗೆಯ ಬಾಳೆ ತಳಿಗಳ ಮಾರಾಟಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಬಾಳೆಯ ವಿವಿಧ ಮೌಲ್ಯವರ್ಧಿತ, ಸಂಸ್ಕರಿತ ಉತ್ಪನ್ನಗಳು, ಬಾಳೆ ದಿಂಡು, ಎಲೆ ಮತ್ತು ನಾರನ್ನು ಬಳಸಿ ತಯಾರಿಸಲಾದ ವಸ್ತುಗಳ ಪ್ರದರ್ಶನ - ಮಾರಾಟ, ತ್ಯಾಜ್ಯವೆಂದು ಪರಿಗಣಿಸಲಾಗುವ ಬಾಳೆಯ ವಿವಿಧ ಭಾಗಗಳನ್ನು ಸಂಪನ್ಮೂಲಗಳನ್ನಾಗಿಸುವ ಪ್ರಾತ್ಯಕ್ಷಿಕೆ ಕೂಡ ಈ ಮೇಳದಲ್ಲಿರುತ್ತದೆ. ಹೊರರಾಜ್ಯದಿಂದ ತಳಿಗಳು
ಈ ರಾಷ್ಟ್ರಮಟ್ಟದ ಮೇಳದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಜಲಗಾಂವ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಕೃಷಿಕರು ಮತ್ತು ಉದ್ಯಮಿಗಳು ತಮ್ಮ ಬಾಳೆ ಕೃಷಿ ಉತ್ಪನ್ನಗಳು ಹಾಗೂ ಬಾಳೆ ಆಧಾರಿತ ಮೌಲ್ಯವರ್ಧಿತ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ.ತಮಿಳುನಾಡಿನ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಬಾಳೆ ಕೃಷಿ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳು ಹಾಗೂ ಇತ್ತೀಚಿನ ಅಭಿವೃದ್ಧಿಗಳ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಬಾಳೆ ಹಣ್ಣಿನ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಆಹಾರ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ಮಾಹಿತಿ ಒದಗಿಸಲಿದ್ದಾರೆ.ಕೈಪಿಡಿ - ಪ್ರಸಾದ ವಿತರಣೆಬಾಳೆಯ ಮಹತ್ವ, ಅದರ ಪೌಷ್ಟಿಕ ಗುಣ, ವಿವಿಧ ಉಪಯೋಗ ಹಾಗೂ ಕೃಷಿ ಮತ್ತು ಆರ್ಥಿಕ ಕೊಡುಗೆ ಬಗ್ಗೆ ಸಮಗ್ರ ಮಾಹಿತಿಯ ವಿಶೇಷ ಕೈಪಿಡಿಯನ್ನು ಮೇಳಕ್ಕೆ ಆಗಮಿಸುವರಿಗೆ ವಿತರಿಸಲಾಗುತ್ತದೆ.
ಇದಲ್ಲದೆ, ಬಾಳೆಯಿಂದ ತಯಾರಿಸಲಾಗುವ ಸಾಂಪ್ರದಾಯಿಕ ಹಾಗೂ ಜನಪ್ರಿಯ ಖಾದ್ಯವಾದ ಒಣಬಾಳೆಹಣ್ಣಿನ ಸುಕೇಳಿಯನ್ನು ಪ್ರಸಾದ ರೂಪದಲ್ಲಿ ವಿತರಿಸಲು ಶ್ರೀ ಮಠವು ನಿರ್ಧರಿಸಿದೆ.ಬಾಳೆಯ ಖಾದ್ಯ ವೈವಿಧ್ಯ :
ಉಡುಪಿಯ ಪ್ರಸಿದ್ಧ ಬಾಣಸಿಗರಿಂದ ಬಾಳೆಯ ಪ್ರತಿಯೊಂದು ಭಾಗವನ್ನೂ ಬಳಸಿಕೊಂಡು, ಸ್ವಾದಿಷ್ಟ ವೈವಿಧ್ಯಮಯ ಖಾದ್ಯ ಮತ್ತು ತಿಂಡಿ-ತಿನಿಸುಗಳನ್ನು ಸ್ಥಳದಲ್ಲಿಯೇ ತಯಾರಿಸಿ, ಸಾರ್ವಜನಿಕರಿಗೆ ಮಾರಾಟ ಮಾಡಲು ವಿಶೇಷ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು, ಮುರಲಿ ಕಡೆಕಾರ್ ಸುದ್ದಿಗೋಷ್ಠಿಯನ್ನು ಸಂಯೋಜಿಸಿದರು. -------ಬಾಕ್ಸ್----------------ಒಂದು ಬಾಳೆ ತಳಿಗೆ ಬ್ರ್ಯಾಂಡ್ ನೇಮ್ ಘೋಷಣೆ ಈ ಮೇಳದಲ್ಲಿ ಒಂದು ವಿಶೇಷ ಬಾಳೆ ತಳಿಗೆ ನೇಮ್ ಬ್ರ್ಯಾಂಡ್ ಘೋಷಣೆ ಮಾಡಲಾಗುವುದು ಎಂದು ಸೋದೆ ಶ್ರೀಗಳು ತಿಳಿಸಿದ್ದಾರೆ.
ಭಾರತದಲ್ಲಿ ಅಂದಾಜು 500ಕ್ಕೂ ಅಧಿಕ ಬಾಳೆ ತಳಿಗಳಿದ್ದು, ಅವುಗಳಲ್ಲಿ ಕೆಲವು ತಳಿಗಳಿಗೆ ಇನ್ನೂ ನಿರ್ದಿಷ್ಟ ಹೆಸರುಗಳಿಲ್ಲ. ಇಂತಹ ಹೆಸರಿಲ್ಲದ ಬಾಳೆ ತಳಿಗಳ ಪೈಕಿ ಒಂದು ವಿಶಿಷ್ಟ ತಳಿಯನ್ನು ಆಯ್ಕೆ ಮಾಡಿ, ಈ ಮೇಳದ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ವಿಶಿಷ್ಟ ನಾಮಕರಣ (ಬ್ರ್ಯಾಂಡ್ ನೇಮ್) ಮಾಡುವ ಮೂಲಕ ಆ ಬಾಳೆ ತಳಿ ಹಾಗೂ ಅದರ ಹಣ್ಣನ್ನು ವ್ಯಾಪಕವಾಗಿ ಪರಿಚಯಿಸಿ, ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.ನ. 29ರಂದು ಬೆಳಿಗ್ಗೆ 7.45ಕ್ಕೆ ಬಾಳೆ ಮುಹೂರ್ತ
ಶ್ರೀಮನ್ಮಧ್ವಾಚಾರ್ಯರ ಸಹೋದರರಾದ ಶ್ರೀ ವಿಷ್ಣುತೀರ್ಥರ ಪರಂಪರೆಯಲ್ಲಿ ಬಂದಂತಹ ಸೋದೆ ಶ್ರೀ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ 2ನೇ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ನಡೆಯುವ ಬಾಳೆ ಮುಹೂರ್ತವು ಇದೇ ತಿಂಗಳ 29 ರಂದು ಬೆಳಿಗ್ಗೆ 7:45 ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಲಿದೆ.ಅಂದು ಬೆಳಿಗ್ಗೆ 6:30 ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಂತರ ಶ್ರೀಚಂದ್ರೇಶ್ವರ, ಅನಂತೇಶ್ವರ ದೇವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲಾನ್ಯಾಸ ಪೂರ್ವಕ ಪ್ರಾರ್ಥಿಸಿ 7:45 ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ , ಕಬ್ಬಿನ ಗಿಡ, ತುಳಸಿ ಗಿಡ ನೆಡುವುದರ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.