ಕನ್ನಡಪ್ರಭ ವಾರ್ತೆ ಶ್ರೀಮಂಗಲ
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ನಾಗರಹೊಳೆ ಹುಲಿ ಸಂರಕ್ಷಣಾ ಮೀಸಲು ಪ್ರದೇಶದ ಸೀಮಾ, ಹುಣಸೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಲಕ್ಷ್ಮಿಕಾಂತ್, ನಾಗರಹೊಳೆ ಪಶು ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಆನೆಚೌಕೂರು ಆರ್‌ಎಫ್‌ಒ ದೇವರಾಜ್ ಇವರ ತಂಡ ಈಗಾಗಲೇ ಸ್ಥಳದಲ್ಲಿ ಬೋನ್ ಇರಿಸಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದಿದೆ.
ಈಗಾಗಲೇ ಬಾಳೆಲೆ ವ್ಯಾಪ್ತಿಯ ದೇವನೂರು ಗ್ರಾಮ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದ ಏಳು ಜಾನುವಾರುಗಳನ್ನು ಹುಲಿ ಕೊಂದಿದ್ದು, ಜಾನುವಾರಗಳ ಮೇಲೆ ದಾಳಿ ನಡೆಸಿದ ಜಾಗದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಗುರುತು ಪತ್ತೆಯಾಗಿದೆ.ಹುಲಿ ಗಣತಿಯಲ್ಲಿ ದೊರೆತಿರುವ ಮಾಹಿತಿಯಂತೆ ಈ ಹುಲಿಯನ್ನು ‘ನಾಗರಹೊಳೆ ಯು 61’ ಎಂದು ಗುರುತಿಸಲಾಗಿದ್ದು, ಗಾತ್ರದಲ್ಲಿ ಸಣ್ಣದಾಗಿರುವ ಗಂಡು ಹುಲಿ ಎಂದು ಗೊತ್ತಾಗಿದೆ.
ಈ ಹುಲಿಯನ್ನು ಆದಷ್ಟು ಬೇಗ ಸೆರೆ ಹಿಡಿದು ಸ್ಥಳೀಯ ಬೆಳೆಗಾರರು, ಕಾರ್ಮಿಕರ ಆತಂಕ, ಜಾನುವಾರು ಸಾಕಿರುವ ಮಾಲೀಕರಿಗೂ ಆತಂಕ ಉಂಟಾಗಿದ್ದು ಹುಲಿ ಸೆರೆಯಿಂದ ಸಮಸ್ಯೆ ನಿವಾರಣೆಯಾಗಲಿದೆ, ಈ ಕಾರ್ಯಚರಣೆಯು ‘ನೆಮ್ಮಲೆ ಹುಲಿ ಆಪರೇಷನ್’ನಂತೆ ಯಶಸ್ವಿ ಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿ.ಸಿ.ಎಫ್ ಸೀಮಾ ಅವರು ಮಾತನಾಡಿ ಹುಲಿ ಸೆರೆಗೆ ಸಕಲ ಸಿದ್ಧತೆ ಆಗಿದೆ. ಕೂಂಬಿಂಗ್ ನಡೆಸಿ ಹುಲಿಯ ಇರುವುವಿಕೆಯನ್ನು ಖಚಿತ ಮಾಡಿಕೊಳ್ಳಲಾಗುವುದು.ನಂತರ ಹುಲಿಯನ್ನು ಅರಣ್ಯಕ್ಕೆ ವಾಪಸು ಕಳುಹಿಸುವ ಕಾರ್ಯಾಚರಣೆ ನಡೆಸಲಾಗುವುದು. ಎರಡನೇ ಹಂತದ ಕಾರ್ಯಾಚರಣೆಯಾಗಿ ಬೋನ್ ಅಳವಡಿಸಿ ಜಾನುವಾರು ಕಳೆಬರ ಇರಿಸಿ ಹುಲಿ ಸೆರೆ ಹಿಡಿಯಲು ಮತ್ತು ಅರವಳಿಕೆ ಹಾರಿಸಿ ಸೆರೆ ಹಿಡಿಯುವ ಕಾರ್ಯ ಯೋಜನೆ ನಡೆಸಲಾಗುವುದು ಎಂದು ವಿವರಿಸಿದರು.ಈ ಸಂದರ್ಭ ಬಾಳೆಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ ಅವರು ಮಾತನಾಡಿ ಹುಲಿ ಸೆರೆಗೆ ಅನುಮತಿ ದೊರೆತ್ತಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಹುಲಿ ಸೆರೆಯಾದರೇ ಜನರಿಗೆ ಸಮಾಧಾನವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.