- ಡಾ. ಬಾಲಗಂಗಾಧರನಾಥ ಸ್ವಾಮೀಜಿ 79ನೇ ಜಯಂತ್ಯುತ್ಸವ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುಮಾರು 2 ಸಾವಿರ ವರ್ಷಗಳ ಇತಿಹಾಸ ಇರುವ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾಗಿ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅಧಿಕಾರ ವಹಿಸಿಕೊಂಡ ನಂತರ 400ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಕ್ಕಳ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ ಹೇಳಿದರು. ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಗುರುವಾರ ಏರ್ಪಡಿಸಿದ್ದ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 79 ನೇ ಜಯಂತ್ಯುತ್ಸವ,ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶಿವ ತಪಸ್ಸು ಮಾಡಿ ಭೈರವೇಶ್ವರ, ಮಲ್ಲಿಕಾರ್ಜುನೇಶ್ವರ, ಸಿದ್ದರಾಮೇಶ್ವರ ಹಾಗೂ ಚಂದ್ರಮೌಳೇಶ್ವರ ಸೇರಿದಂತೆ ಪಂಚಲಿಂಗೇಶ್ವರ ಲಿಂಗಗಳನ್ನು ಸ್ಥಾಪನೆ ಮಾಡಿದ್ದರಿಂದ ಇದು ಪವಿತ್ರ ಸ್ಥಳವಾದ ಆದಿಚುಂಚನಗಿರಿ ಮಠವಾಗಿರುವುದು ಹೆಮ್ಮೆಯ ಸಂಗತಿ ಎಂದರು.ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಮೊದಲು ಮಠದಲ್ಲಿ ಯಾವುದೇ ವಸ್ತುಗಳು ಇಲ್ಲದಿರುವಾಗ ಪ್ರತೀ ಹಳ್ಳಿ ಗಳಿಗೂ ಹೋಗಿ ದಾನಿಗಳು ನೀಡುವ ದವಸ ಧಾನ್ಯ ಸಂಗ್ರಹಿಸಿ ಮಠವನ್ನುಕಟ್ಟಿ ಬೆಳೆಸಿದ್ದಾರೆ. ಓರ್ವ ಸ್ವಾಮೀಜಿ ಏಕ ಕಾಲದಲ್ಲಿ ಇಂತದ್ದೊಂದು ದೊಡ್ಡ ಸಾಧನೆ ಮಾಡಿರುವುದು ಜಗತ್ತಿನ ಇತಿಹಾಸದಲ್ಲೇ ಮೊದಲು ಎಂದು ಶ್ಲಾಘಿಸಿದರು. ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು ಮೂಲಭೂತ ಸೌಕರ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಆರೋಗ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಹೋರಾಟ ಮಾಡಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘ ಬಡವರ ಹಾಗೂ ಸಮಾಜದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸದಾ ಶ್ರಮಿಸಲು ಬದ್ಧವಾಗಿದೆ ಎಂದು ಹೇಳಿದರು. ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನವನ್ನು ಸಂಘದಿಂದ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದು, ಜಿಲ್ಲೆಯ ಜನಾಂಗದ ಪ್ರಥಮ ಪಿಯುಸಿ ಮತ್ತು ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಒಟ್ಟು 103 ವಿದ್ಯಾರ್ಥಿಗಳಿಗೆ 3.09 ಲಕ್ಷ ರು.ಗಳ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಶ್ರೀಮತಿ ಲಕ್ಷ್ಮಿ ಕಡಿದಾಳ್ ಮಂಜಪ್ಪನವರ ಅಪೇಕ್ಷೆಯಂತೆ ಅವರು ಕೊಟ್ಟ ಠೇವಣಿ ಹಣಕ್ಕೆ ಬರುವ ಬಡ್ಡಿ ಹಣದಲ್ಲಿ ಪ್ರತೀ ವರ್ಷ ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢ ಶಾಲೆಯ ಜನಾಂಗದ 6 ವಿದ್ಯಾರ್ಥಿನಿಯರಿಗೆ ತಲಾ ಒಂದು ಸಾವಿರ ರು. ಪ್ರೋತ್ಸಾಹ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರಾದ ಕೆ.ಎಸ್. ನಾರಾಯಣಗೌಡ, ಕೆ.ಕೆ.ಮನುಕುಮಾರ್, ಎಂ.ಬಿ.ಆನಂದ್, ಬಿ.ಸುಜೀತ್, ಟಿ.ಡಿ.ಮಲ್ಲೇಶ್, ಜಿ.ಎಚ್.ದಿನೇಶ್, ಕೆ.ಪಿ. ಪೃಥ್ವಿರಾಜ್, ಎ.ಎಚ್.ರುದ್ರೇಗೌಡ, ಎಚ್.ಎಂ.ಸತೀಶ್, ಎಚ್.ಕೆ.ನವೀನ್, ಎಚ್.ಪಿ.ಹೇಮಂತ್, ಕೆ.ಎ.ರಾಜೇಗೌಡ, ಮಾಜಿ ಅಧ್ಯಕ್ಷ ಐ.ಎಸ್.ಉಮೇಶ್‌ಚಂದ್ರ, ಆರತಿ ಓಂಕಾರೇಗೌಡ ಉಪಸ್ಥಿತರಿದ್ದರು.18 ಕೆಸಿಕೆಎಂ 3ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ನಡೆದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಯವರ 79ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್ ಉದ್ಘಾಟಿಸಿದರು.