ಕಲಬುರಗಿ ಜೈಲಲ್ಲಿ ನಿಷೇಧಿತ ಪದಾರ್ಥಗಳ ಚೆಂಡು ಪತ್ತೆ!

KannadaprabhaNewsNetwork |  
Published : Oct 21, 2024, 12:30 AM IST
Kalaburagi Jail | Kannada Prabha

ಸಾರಾಂಶ

ಗುಟ್ಕಾ, ಬೀಡಿ, ಪಾನ್‍ಮಸಾಲಾ ಜೈಲೊಳಗೆ ಸಾಗಣೆಗೆ ವಿನೂತನ ವ್ಯವಸ್ಥೆ ರೂಢಿಸಿಕೊಂಡ ಗ್ಯಾಂಗ್‌. ನಿಷೇಧಿತ ಪದಾರ್ಥಗಳನ್ನು ಸುತ್ತಿ ಚೆಂಡಿನ ಆಕಾರ ಮಾಡಿ ಜೈಲು ಅಂಗಳಕ್ಕೆ ಎಸೆಯುವ ಖದೀಮರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಕಲಬುರಗಿ ಸೆಂಟ್ರಲ್ ಜೈಲಿನ ಒಳ ಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿದ್ದು, ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಜೈಲಿನ ಒಳಭಾಗದ ಗೋಡೆಗಳ ಬಳಿ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಪತ್ತೆಯಾಗಿದ್ದು, ಈ ಉಂಡೆಗಳಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.

ಜೈಲಿನಲ್ಲಿರುವ ಪರಿಚಿತ ಕೈದಿಗಳಿಗೆ ತಲುಪುವಂತೆ ನಿಷೇಧಿತ ವಸ್ತುಗಳನ್ನು ಒಳಗೊಂಡ ಇಂತಹ ಚೆಂಡುಗಳನ್ನು ಕಿಡಿಗೇಡಿಗಳು ಎಸೆದು ಪರಾರಿಯಾಗುವ ರೂಢಿ ಈ ಹಿಂದಿನಿಂದಲೂ ಚಾಲ್ತಿಯಲ್ಲಿದ್ದು, ಇದೇ ಮೊದಲ ಬಾರಿಗೆ ಈ ಪ್ಲಾಸ್ಟಿಕ್ ಚೀಲಗಳಿಂದ ಮಾಡಿರುವ ಚೆಂಡುಗಳು ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ದಿದೆ ಎನ್ನಲಾಗುತ್ತಿದೆ.

ಜೈಲು ಸಿಬ್ಬಂದಿ ಸಂಗೀತಾ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈ ಚೆಂಡುಗಳನ್ನು ಗಮನಿಸಿದ ಕೂಡಲೆ ಜೈಲಿನ ಅಧೀಕ್ಷಕಿ ಅನಿತಾ ಅವರ ಗಮನಕ್ಕೆ ತಂದಿದ್ದಾರೆ. ನಂತರ ಆ ಚೆಂಡಿನ ಆಕಾರದ ಉಂಡೆಗಳನ್ನು ಬಿಡಿಸಿ ನೋಡಿದಾಗ ಗುಟ್ಕಾ, ಬೀಡಿ ಹಾಗೂ ಪಾನ್ ಮಸಾಲಾ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗುತ್ತಿದ್ದಂತೆಯೇ ತಕ್ಷಣ ಫರಹತಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಲಾಗಿದೆ.

ಈಗಾಗಲೇ ಮೊಬೈಲ್ ಬಳಕೆ, ಹನಿಟ್ರ್ಯಾಪ್ ಹಾಗೂ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಕೆಲವು ಕೈದಿಗಳು ಬ್ಲಾಕ್ ಮೇಲ್ ಮಾಡುತ್ತಿರುವ ವಿದ್ಯಮಾನಗಳು ಇಡೀ ರಾಜ್ಯದ ಗಮನ ಸೆಳೆದ ಬೆನ್ನಲ್ಲಿಯೇ, ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಾಗೂ ಇದೇ ಕಚೇರಿಯ ಎಸ್ಪಿ ಯಶೋಧಾ ಕಲಬುರಗಿ ಜೈಲಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಜೈಲರ್‌ಗಳಾದ ಶಹನಾಜ್ ನೀಗೆವಾನ್ ಹಾಗೂ ಪರಮಾನಂದ ಅವರನ್ನು ಅಮಾನತುಗೊಳಿಸಲಾಗಿದೆ. ಹಾಗಾಗಿ, ಇದೀಗ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಜೈಲಿನೊಳಗೆ ಎಸೆಯುವ ಜಾಲದ ಕುರಿತು ಮತ್ತೊಂದು ಸುತ್ತಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ