ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಯ ಕೊಡುಗೆ ವಿಶಿಷ್ಟವಾದದ್ದು. ಬ್ರಿಟಿಷರ ಆಳ್ವಿಕೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಾಗ ಬಳ್ಳಾರಿ ಜಿಲ್ಲೆಯಲ್ಲಿಯೂ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಕಹಳೆ ಮೊಳಗಿತ್ತು.
ಮಂಜುನಾಥ ಕೆ.ಎಂ.
ಬಳ್ಳಾರಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಯ ಕೊಡುಗೆ ವಿಶಿಷ್ಟವಾದದ್ದು. ಬ್ರಿಟಿಷರ ಆಳ್ವಿಕೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಾಗ ಬಳ್ಳಾರಿ ಜಿಲ್ಲೆಯಲ್ಲಿಯೂ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಕಹಳೆ ಮೊಳಗಿತ್ತು.
ಬಳ್ಳಾರಿ ಜಿಲ್ಲೆ ಐತಿಹಾಸಿಕವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಸಾಂಸ್ಕೃತಿಕ ಸಂಪರ್ಕದ ನೆಲೆಯಾಗಿದ್ದರಿಂದ ರಾಷ್ಟ್ರೀಯ ಚಳವಳಿಯ ಪ್ರಭಾವವೂ ಇಲ್ಲಿ ವ್ಯಾಪಕವಾಗಿತ್ತು. ಟೇಕೂರು ಸುಬ್ರಮಣ್ಯಂ ಅವರು ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ವಹಿಸಿದ್ದರು. ವಿದ್ಯಾರ್ಥಿ, ಯುವಜನರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ಧುಮುಕಿದ್ದರು. ಟೇಕೂರು ಸುಬ್ರಮಣ್ಯಂ ಅವರು ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದರು.
ಕೊಟ್ಟೂರಿನ ಗೊರ್ಲಿ ಶರಣಪ್ಪ, ವೆಂಕೋಬರಾವ್, ಕೋಲಾಚಲಂ ವೆಂಕಟರಾವ್, ಬಳ್ಳಾರಿ ಸಿದ್ದಮ್ಮ, ದೇವೇಂದ್ರಪ್ಪ, ತಿಮ್ಮಪ್ಪ, ರೇವಣಸಿದ್ದಯ್ಯ, ಚಿದಾನಂದಶಾಸ್ತ್ರಿ, ಆದವಾನಿ ಗಾದಿಲಿಂಗನಗೌಡ ಸೇರಿದಂತೆ ಅನೇಕ ಮಹನೀಯರು ಜಿಲ್ಲೆಯ ವಿವಿಧೆಡೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿ, ಚಳವಳಿ ತೀವ್ರಗೊಳಿಸಿದರು.
ಬಳ್ಳಾರಿಗೆ ಬಂದಿದ್ದ ಗಾಂಧೀಜಿ
ಮಹಾತ್ಮ ಗಾಂಧೀಜಿಯವರು ಬಳ್ಳಾರಿಗೆ ಆಗಮಿಸಿ ಇಲ್ಲಿನ ಹೋರಾಟಗಾರರನ್ನು ಸ್ವಾತಂತ್ರ್ಯ ಚಳವಳಿಗೆ ಹುರಿದುಂಬಿಸಿದರು. 1921ರ ಅಕ್ಟೋಬರ್ 3ರಂದು ಬಳ್ಳಾರಿಗೆ ರೈಲಿನಲ್ಲಿ ಬಂದಿಳಿದ ಗಾಂಧೀಜಿ ಅಂದು ಸಂಜೆ ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಬ್ರಿಟೀಷರ ಆಡಳಿತದ ದೌರ್ಜನ್ಯ ಹಾಗೂ ಭಾರತೀಯ ಸ್ವಾಭಿಮಾನದ ಹೋರಾಟ ಕುರಿತು ಮನವರಿಕೆ ಮಾಡಿಕೊಟ್ಟರಲ್ಲದೆ, 1934ರ ಮಾರ್ಚ್ 3ರಂದು ಎರಡನೇ ಬಾರಿಗೆ ಹರಿಜನೋದ್ಧಾರ ಹಾಗೂ ಸಮಾಜ ಸುಧಾಣೆ ಕಾರ್ಯಗಳಿಗಾಗಿ ಬಳ್ಳಾರಿಗೆ ಭೇಟಿ ನೀಡಿದ್ದ ಗಾಂಧೀಜಿಯವರು ಸಂಡೂರು ಭಾಗಕ್ಕೂ ಭೇಟಿ ನೀಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ, ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಭೇಟಿ ನೀಡಿ ಇಲ್ಲಿನ ಪ್ರಮುಖ ಹೋರಾಟಗಾರರ ಜೊತೆ ಸಭೆ ನಡೆಸಿದ್ದರು. ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಚಳವಳಿಗಾರರ ಆರೋಗ್ಯ ವಿಚಾರಿಸಿದ್ದರು.
ಭಾರತ ಬಿಟ್ಟು ತೊಲಗಿ
1942ರ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿಯೂ ದೇಶಾದ್ಯಂತ ಉಂಟಾದ ಚಳವಳಿಯ ಅಲೆ ಬಳ್ಳಾರಿ ಜಿಲ್ಲೆಯ ಮೇಲೂ ಪರಿಣಾಮ ಬೀರಿತು. ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಮತ್ತಷ್ಟು ಬಲಗೊಂಡಿತು. ದೇಶಕ್ಕಾಗಿ ಜೈಲು ಸೇರಲು, ಕಷ್ಟ ಅನುಭವಿಸಲು ಸಿದ್ಧರಾದ ಹೋರಾಟಗಾರರು ಮುಂದಿನ ಪೀಳಿಗೆಗೆ ಸ್ಫೂರ್ತಿಯಾದರು.
ಸ್ವಾತಂತ್ರ್ಯ ಹೋರಾಟದ ಮತ್ತೊಂದು ಪ್ರಮುಖ ಅಂಶವೆಂದರೆ ಸಾಮಾಜಿಕ ಜಾಗೃತಿ. ಅಸ್ಪೃಶ್ಯತೆ ನಿವಾರಣೆ, ಮಹಿಳಾ ಶಿಕ್ಷಣ, ಸ್ವಚ್ಛತೆ, ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿಯಂತಹ ವಿಚಾರಗಳಿಗೂ ರಾಷ್ಟ್ರೀಯ ಚಳವಳಿಯೊಂದಿಗೆ ಮಹತ್ವ ದೊರೆಯಿತು. ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರಿಂದ ರಾಜಕೀಯ ಮುಕ್ತಿ ಪಡೆಯುವುದಷ್ಟೇ ಅಲ್ಲ; ಸಮಾಜವನ್ನು ಅಜ್ಞಾನ, ಅಸಮಾನತೆ ಮತ್ತು ಶೋಷಣೆಯಿಂದ ಮುಕ್ತಗೊಳಿಸುವುದೂ ಆಗಿದೆ ಎಂಬ ಸಂದೇಶ ಜನರಲ್ಲಿ ಬೇರೂರಿತು.ಗಾಂಧೀಜಿ ಚಿತಾಭಸ್ಮ:
ಬಳ್ಳಾರಿ ಭೇಟಿ ಸಂದರ್ಭದಲ್ಲಿ ಗಾಂಧೀಜಿ ಬಳ್ಳಾರಿ ಜಿಲ್ಲೆಗೆ ಮತ್ತೊಮ್ಮೆ ಬರುತ್ತೇನೆ ಎಂದಿದ್ದರು. ಆದರೆ, 1948ರಲ್ಲಿ ಗೋಡ್ಸೆ ಗುಂಡಿಗೆ ಬಲಿಯಾದ ಬಳಿಕ ಅವರ ಚಿತಾಭಸ್ಮ ಬಂತು. ಗಾಂಧೀಜಿಯವರ ಚಿತಾಭಸ್ಮವನ್ನು ಕೂಡ್ಲಿಗಿಗೆ ತಂದು ಅಲ್ಲಿ ಪವಿತ್ರ ಚಿತಾ ಭಸ್ಮ ಸ್ಮಾರಕವನ್ನಾಗಿ ಸ್ಥಾಪಿಸಲಾಯಿತು. ಇದು ರಾಷ್ಟ್ರದಲ್ಲಿನ ಎರಡನೇ ಚಿತಾಭಸ್ಮವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.