ದಕ್ಷಿಣ ಕಾನೂನು ವಿವಿ ಸ್ಥಾಪನೆಗೆ ವಿದ್ಯಾವರ್ಧಕ ಸಂಘ ವಿರೋಧ

KannadaprabhaNewsNetwork |  
Published : Aug 15, 2026, 03:15 AM IST
ವಿದ್ಯಾವರ್ಧಕ ಸಂಘ | Kannada Prabha

ಸಾರಾಂಶ

ನವನಗರದಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಕಾನೂನು ವಿವಿ ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ತೀರ್ಮಾನಿಸಿರುವುದನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ತೀವ್ರವಾಗಿ ಖಂಡಿಸಿದೆ.

ಧಾರವಾಡ:

ಇಲ್ಲಿನ ನವನಗರದಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಕಾನೂನು ವಿವಿ ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ತೀರ್ಮಾನಿಸಿರುವುದನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ತೀವ್ರವಾಗಿ ಖಂಡಿಸಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಸರ್ಕಾರದ ಈ ತೀರ್ಮಾನವು ಕರ್ನಾಟಕ ಏಕೀಕರಣದ ಆಶಯಗಳಿಗೆ ಧಕ್ಕೆ ಉಂಟು ಮಾಡಲಿದೆ. 2009ರಲ್ಲಿ ಇಲ್ಲಿನ ರಾಜ್ಯ ಕಾನೂನು ವಿವಿ ಸ್ಥಾಪಿಸಿದ್ದು, ಇದೇ ವಿವಿಗೆ ಆಡಳಿತ ಭವನ, ಗ್ರಂಥಾಲಯ ಸೇರಿದಂತೆ ಸರಿಯಾದ ಮೂಲಸೌಕರ್ಯಗಳಿಲ್ಲ. ಅಲ್ಲದೇ, ಕಾಯಂ ಉಪನ್ಯಾಸಕರ ನೇಮಕಾತಿ ಇಲ್ಲದೇ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಬೇಕಾಗಿದೆ ಎಂದರು.

ವಿಶ್ವವಿದ್ಯಾಲಯ ನ್ಯಾಕ್‌ನ ಎ-ಗ್ರೇಡ್ ಮಾನ್ಯತೆ ಹೊಂದಿದೆ. ಪ್ರತಿ ವರ್ಷ ಕಾನೂನು ಪದವಿಗೆ ಪ್ರವೇಶ ಪಡೆಯುವವರ ಪ್ರಮಾಣ ಕೂಡ ಹೆಚ್ಚಳವಾಗಿದೆ. ಆದರೆ, ಸರ್ಕಾರ ಇದುವರೆಗೂ ವಿಶ್ವವಿದ್ಯಾಲಯಕ್ಕೆ ಅಗತ್ಯ ನೆರವು ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ. ಈಗಾಗಲೇ ಬೆಂಗಳೂರಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ಇದೆ. ಜತೆಗೆ 10ಕ್ಕೂ ಅಧಿಕ ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಆರಂಭಿಸಲು ಮುಂದಾಗುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಈ ವಿಷಯದಲ್ಲಿ ಸರ್ಕಾರದ ಈ ನಿರ್ಧಾರ ಸರಿಯಾಗಿಲ್ಲ, ನಿರ್ಲಕ್ಷದಿಂದ ಉತ್ತರ ಕರ್ನಾಟಕ ಭಾಗಗಳು ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಂದ ದಿನದಿಂದ ದಿನಕ್ಕೆ ವಂಚಿತವಾಗುತ್ತಿದೆ. ಆದ್ದರಿಂದ ಮೊದಲು ಈಗಿರುವ ಕಾನೂನು ವಿವಿ ಸದೃಢಗೊಳಿಸಬೇಕು ಎಂದ ಬಸವಪ್ರಭು ಅವರು, ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರ ಗಮನಕ್ಕೆ ತರಲಾಗುವುದು. ಸರ್ಕಾರ ತೆಗೆದುಕೊಂಡ ನಿರ್ಧಾರ ಕೈಬಿಡದಿದ್ದರೆ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ವೀರಣ್ಣ ಒಡ್ಡೀನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಸಂಕೇತವಲ್ಲ. ಏಕತೆಯ ಪ್ರತೀಕ-ಸೌಮ್ಯ
ಸಂಭ್ರಮದ ಭಾರತ ಮಾತಾ ಮೆರವಣಿಗೆ