ಶ್ರೀಕನಕ ದುರ್ಗಮ್ಮ ದೇವಿ ಮೂರ್ತಿ ತಲೆ ಮೇಲೆ ಕಾಲಿಟ್ಟ ನಟ ದರ್ಶನ್ ಫ್ಯಾನ್‌ : ವಿವಾದ!

Published : Aug 31, 2024, 09:07 AM IST
Darshan Fans

ಸಾರಾಂಶ

ಕೊಲೆ ಪ್ರಕರಣ ಎದುರಿಸುತ್ತಿರುವ ನಟ ದರ್ಶನ್‌ಗೆ ಒಳಿತಾಗಲಿ ಎಂದು ಹಾರೈಸಿ ಅವರ ಅಭಿಮಾನಿಗಳು ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಸಮರ್ಪಿಸಿದರು.

ಬಳ್ಳಾರಿ :  ಕೊಲೆ ಪ್ರಕರಣ ಎದುರಿಸುತ್ತಿರುವ ನಟ ದರ್ಶನ್‌ಗೆ ಒಳಿತಾಗಲಿ ಎಂದು ಹಾರೈಸಿ ಅವರ ಅಭಿಮಾನಿಗಳು ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಸಮರ್ಪಿಸಿದರು. ಆ ಬಳಿಕ ದೇಗುಲದ ಬಳಿಯಿರುವ ಬೃಹತ್ ದೇವಿ ಮೂರ್ತಿಗೆ 30 ಅಡಿ ಉದ್ದದ ಹೂವಿನ ಹಾರ ಹಾಕುವ ವೇಳೆ ದೇವಿ ತಲೆ ಮೇಲೆ ಅಭಿಮಾನಿಯೊಬ್ಬ ಕಾಲಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ದೇವಿ ಮೂರ್ತಿಗೆ ಹೂವಿನಹಾರ ಹಾಕುವಾಗ ಕ್ರೇನ್ ಬಳಸಲಾಗುತ್ತದೆ. ಆದರೆ ದರ್ಶನ್ ಅಭಿಮಾನಿಗಳು ಬರಿಗಾಲಲ್ಲಿ ಮೂರ್ತಿ ಮೇಲೆ ಹತ್ತಿ ಹೂವಿನಹಾರ ಹಾಕಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗುತ್ತಿದ್ದ ವಿಚಾರ ಬಹಿರಂಗವಾಗಿ ವಿವಾದಕ್ಕೆ ಕಾರಣವಾದ ಬ‍ಳಿಕ ದರ್ಶನ್‌ರನ್ನು ಗುರುವಾರ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಶ್ರೀ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆದಷ್ಟು ಶೀಘ್ರ ದರ್ಶನ್‌ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿದರು.

ದರ್ಶನ್‌ಗೆ ತಲುಪದ ಪ್ರಸಾದ

ದರ್ಶನ್‌ರ ಒಳಿತಿಗೆ ಹಾರೈಸಿ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕುಂಕುಮ, ಅಕ್ಷತೆ ಹಾಗೂ ನಿಂಬೆಹಣ್ಣನ್ನು ದರ್ಶನ್‌ಗೆ ನೀಡಲು ಕಾರಾಗೃಹದ ಬಳಿ ಅಭಿಮಾನಿಗಳು ಬಂದಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದಾಗ ಪ್ರಸಾದವನ್ನು ಬ್ಯಾರಿಕೇಡ್‌ಗಳ ಮೇಲೆಯೇ ಇಟ್ಟು ತೆರಳಿದ್ದಾರೆ.

ದರ್ಶನ್ ಸಿನಿಮಾ ನೋಡಿದ್ದು ಬರೀ 13 ಅಭಿಮಾನಿಗಳು!

ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರ ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ನಿರೀಕ್ಷೆಯಿಂದ ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಅವರ ನಟನೆಯ ಶಾಸ್ತ್ರಿ (ಹಳೇ ಚಿತ್ರ) ಪ್ರದರ್ಶನ ಮಾಡಲಾಗಿತ್ತು. ಆದರೆ ಈ ಸಿನಿಮಾ ನೋಡಲು ಬೆಳಗ್ಗಿನ ಶೋಗೆ ಬಂದಿದ್ದು 13 ಜನ ಮಾತ್ರ. ಹೀಗಾಗಿ ಒಂದು ಶೋ ಮಾತ್ರ ಅವರ ಚಿತ್ರ ಪ್ರದರ್ಶಿಸಲಾಯಿತು ಎಂದು ಚಿತ್ರಮಂದಿರದ ಸಿಬ್ಬಂದಿಯೊಬ್ಬರು ''ಕನ್ನಡಪ್ರಭ''ಕ್ಕೆ ಮಾಹಿತಿ ನೀಡಿದರು.

 ಶುರುವಾಗಿದೆ ಕೈದಿ ನಂ.511 ಟ್ರೆಂಡ್‌ 

ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿರುವ ದರ್ಶನ್‌ಗೆ ನೀಡಲಾಗಿರುವ ಕೈದಿ ಸಂಖ್ಯೆ 511. ಈ ಹಿಂದೆ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ 6016 ಸಂಖ್ಯೆ ನೀಡಲಾಗಿತ್ತು. ಆಗ ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ಆ ಸಂಖ್ಯೆ ಬರೆಸಿಕೊಂಡಿದ್ದರು. ಇದೀಗ ಆ ಹಳೆಯ ಸಂಖ್ಯೆಯನ್ನು ಅಳಿಸಿ ಕೈದಿ ನಂ.511 ಬರೆಸಿಕೊಳ್ಳಲು ಶುರು ಮಾಡಿದ್ದಾರೆ.

PREV

Recommended Stories

ವೈರಾಣು ಜ್ವರ ಉಲ್ಬಣಗೊಳ್ಳದಂತೆ ಜಾಗ್ರತೆ ವಹಿಸಿ: ವಾಗೀಶ ಶಿವಾಚಾರ್ಯ
ಸಮಸ್ಯೆ-ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ: ರಾಜೇಶ್ ಹೊಸಮನೆ