ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ನಡೆದಿರುವ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಾ. 28ರಂದು ಜರುಗುವ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.
ಪರಿಶೀಲನೆ ಕಾರ್ಯ ಭಾಗಶಃ ಪೂರ್ಣ: ವಿಶ್ವವಿದ್ಯಾಲಯದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡಿದ್ದು, ಈ ವರೆಗೆ 27,575 ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಇದರಲ್ಲಿ 4300 ಪ್ರಮಾಣಪತ್ರಗಳು ನಕಲಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಮತ್ತೊಂದು ಹಂತದ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ. ನಕಲಿ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಇಬ್ಬರು ಹೊರಗುತ್ತಿಗೆ ನೌಕರರು ತಮ್ಮ ಖಾತೆಗೆ ಫೋನ್‌ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದು, ಸಾಕಷ್ಟು ಜನರಿಂದ ನೇರವಾಗಿ ನಗದು ತೆಗೆದುಕೊಂಡಿದ್ದಾರೆ. ನಗದು ಇಲ್ಲದವರ ಬಳಿ ಮಾತ್ರ ಫೋನ್ ಪೇ ಮಾಡುವಂತೆ ಕೇಳುತ್ತಿದ್ದರು. ಫೋನ್ ಪೇ ಹಾಗೂ ಗೂಗಲ್ ಪೇಯಿಂದಲೇ ಸುಮಾರು ₹27 ಲಕ್ಷಕ್ಕೂ ಹೆಚ್ಚು ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ನಗದು ಸೇರಿ ಕೋಟ್ಯಂತರ ರು. ಹಣ ಅವ್ಯವಹಾರ ನಡೆದಿರುವ ಬಗ್ಗೆ ವಿವಿಗೆ ಖಾತ್ರಿಯಾಗಿದೆ.
ಕುಲಪತಿಗಳ ಸಹಿಯನ್ನೇ ನಕಲಿ ಮಾಡಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರಗಳನ್ನು ವಿತರಣೆ ಮಾಡಿರುವ ಪ್ರಕರಣ ಕಳೆದ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿನಿಯೊಬ್ಬರು ಪ್ರಮಾಣಪತ್ರ ಪಡೆಯಲು ನೀಡಿದ್ದ ಹಣದ ರಶೀದಿ ಪಡೆಯಲು ವಿಶ್ವವಿದ್ಯಾಲಯಕ್ಕೆ ಬಂದಾಗ ವಿಷಯ ಬೆಳಕಿಗೆ ಬಂದಿತ್ತು. ಸುಮಾರು 50ರಿಂದ 60 ಜನರಿಗೆ ನಕಲಿ ಪ್ರಮಾಣಪತ್ರ ವಿತರಣೆ ಮಾಡಿರಬಹುದು ಎಂದೇ ಅಂದಾಜಿಸಲಾಗಿತ್ತು. ಈ ಸಂಬಂಧ ತನಿಖೆ ತಂಡ ರಚನೆಯ ಬಳಿಕ ನಡೆದ ಪ್ರಮಾಣಪತ್ರಗಳ ಪರಿಶೀಲನೆಯಿಂದ ಪ್ರಕರಣದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ಇಡೀ ಪ್ರಕರಣದಲ್ಲಿ ಒಂದು ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರಬಹುದು ಎಂದು ವಿವಿ ಅಂದಾಜಿಸಿದೆ. ಬಳ್ಳಾರಿ ವಿವಿಯಲ್ಲಿ ಘಟಿಕೋತ್ಸವ ಸರ್ಟಿಫಿಕೆಟೇ ನಕಲಿ ಶೀರ್ಷಿಕೆಯಡಿ ಫೆ. 23ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು.