ಕಾಡು ಪ್ರಾಣಿಗಳ ದಾಳಿ: ಮುಸುಕಿನ ಜೋಳ ನಾಶ

KannadaprabhaNewsNetwork | Published : Mar 21, 2025 12:36 AM

ಸಾರಾಂಶ

ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದ ರೈತ ಗೋವಿಂದ ಶೆಟ್ಟಿ ಜಮೀನಿನಲ್ಲಿ ಕಾಡುಪ್ರಾಣಿಗಳು ಮುಸೂಕಿನ ಜೋಳದ ಫಸಲನ್ನು ತಿಂದು ನಷ್ಟ ಉಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಹನೂರುಕಾಡು ಪ್ರಾಣಿಗಳ ಹಾವಳಿಗೆ ಮುಸುಕಿನ ಜೋಳ ಫಸಲು ನಾಶವಾಗಿದ್ದು ಅರಣ್ಯ ಅಧಿಕಾರಿಗಳು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ರೈತ ಗೋವಿಂದ ಶೆಟ್ಟಿಗೆ ಸೇರಿದ ಮುಸುಕಿನ ಜೋಳದ ಫಸಲನ್ನು ರಾತ್ರಿ ವೇಳೆ ಕಾಡುಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ತುಳಿದು ಹಾಕಿದ ಬಗ್ಗೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರೈತರ ಆಕ್ರೋಶ:

ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಜೋನ್ ವಲಯದ ಅರಣ್ಯ ಪ್ರದೇಶದಿಂದ ರಾತ್ರಿ ವೇಳೆ ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ತಿಂದು ಲಕ್ಷಾಂತರ ರು. ಬೆಳೆ ಹಾನಿ ಉಂಟು ಮಾಡುತ್ತಿವೆ. ಹೀಗಾಗಿ ಅರಣ್ಯ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ವಿಫಲರಾಗಿದ್ದಾರೆ. ಜೊತೆಗೆ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರ ಸಕಾಲದಲ್ಲಿ ನೀಡದೆ ಸಂಕಷ್ಟದಲ್ಲಿರುವ ರೈತನಿಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಹೆಚ್ಚಾದ ಕಾಡುಪ್ರಾಣಿಗಳ ಹಾವಳಿ:

ತಾಲೂಕಿನ ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಮತ್ತು ಜಿ ಆರ್ ನಗರ ದೊಮ್ಮನಗದ್ದೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಬಳಿ ಬರುವ ಉಡುತೊರೆ ಹಳ್ಳದ ಜಮೀನುಗಳ ಬಳಿಯೇ ಹಲವಾರು ತಿಂಗಳಿಂದ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದರೂ ಅರಣ್ಯ ಅಧಿಕಾರಿಗಳು ಹಿಡಿಯಲು ವಿಫಲರಾಗಿದ್ದಾರೆ. ಮತ್ತೊಂದಡೆ ಮಲೆಮಾದೇಶ್ವರ ವನ್ಯಧಾಮದಿಂದ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಲಕ್ಷಾಂತರ ಬೆಳೆ ಹಾನಿ ಉಂಟು ಮಾಡುತ್ತಿದೆ. ಜೊತೆಗೆ ಕಾಡು ಹಂದಿಗಳು ಸಹ ಅರಣ್ಯ ಪ್ರದೇಶದಲ್ಲಿ ನೀರು ಆಹಾರ ಸಿಗದೆ ರೈತರ ಜಮೀನಿಗೆ ಬಂದು ಮುಸುಕಿನ ಜೋಳದ ಫಸಲನ್ನು ತಿಂದು ಹಾಳು ಮಾಡುತ್ತಿದೆ. ಸೂಕ್ತ ಪರಿಹಾರ ಸಹ ಅರಣ್ಯ ಇಲಾಖೆ ನೀಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗನದೊಡ್ಡಿ, ಬಸಪ್ಪನ ದೊಡ್ಡಿ ಹಾಗೂ ಜಿಆರ್ ನಗರ ಸೇರಿದಂತೆ ಸುತ್ತಲಿನ ರೈತರ ಜಮೀನುಗಳ ಬಳಿ ರಾತ್ರಿ ಹಗಲು ಎನ್ನದೆ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಮತ್ತೊಂದೆಡೆ ಕಾಡಾನೆಗಳ ಹಾವಳಿ ವಿಪರೀತವಾಗಿ ಬೆಳೆ ಹಾನಿ ಮಾಡುತ್ತಿದೆ. ಕಾಡು ಹಂದಿಗಳು ಸಹ ಹಿಂಡು ಹಿಂಡಾಗಿ ಬಂದು ರೈತರ ಜಮೀನುಗಳಲ್ಲಿ ಫಸಲನ್ನು ಹಾಳು ಮಾಡುತ್ತಿವೆ. ಹೀಗಾಗಿ ಅರಣ್ಯದಂಚಿನ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್‌, ಆನೆಕಂದಕ ನಿರ್ಮಾಣ ಮಾಡಿ ಕಾಡುಪ್ರಾಣಿಗಳು ಬರದಂತೆ ತಡೆಗಟ್ಟಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.

- ಅಮ್ಜದ್ ಖಾನ್, ತಾಲೂಕು ಅಧ್ಯಕ್ಷ, ರಾಜ್ಯ ರೈತ ಸಂಘ

Share this article