- ಮಾಪಣ್ಣ, ಸ್ನೇಹಿತ ಅಲೀಸಾಬ್‌ನ ಭೀಕರ ಕೊಲೆ ಪ್ರಕರಣಗಳು
- ಮಾಪಣ್ಣ ಕೊಲೆ ಪ್ರಕರಣದಲ್ಲಿ ಮೂವರು, ಅಲೀಸಾಬ್ ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನ----
ಕನ್ನಡಪ್ರಭ ವಾರ್ತೆ ಶಹಾಪುರ(ಯಾದಗಿರಿ ಜಿಲ್ಲೆ) ಮಾ.16 ರಂದು ಯಾದಗಿರಿ ಜಿಲ್ಲೆ ಶಹಾಪುರದ ಸಾದ್ಯಾಪುರ ಕ್ರಾಸ್ ಬಳಿ ದಲಿತ ಮುಖಂಡ, ರೌಡಿ ಶೀಟರ್ ಪಟ್ಟಿಯಲ್ಲಿದ್ದ ಮದ್ದರಕಿ ಗ್ರಾಮದ ಮಾಪಣ್ಣ ಬಡಿಗೇರ್ ಹಾಗೂ ಮದ್ದರಕಿ ಗ್ರಾಮದಲ್ಲಿ ಮನೆಯೊಂದರಲ್ಲಿ ನಡೆದಿದ್ದ ಅಲೀಸಾಬ್ ಎಂಬಾತನ ಭೀಕರ ಹತ್ಯೆಗಳ (ಜೋಡಿ ಕೊಲೆ) ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೊಲೀಸರು ಒಟ್ಟು ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲೀಸಾಬ್ ಕೊಲೆ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯಮಂಡಳಿ ಮುಂದೆ ಒಪ್ಪಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಪಣ್ಣ (52) ಎಂಬಾತನನ್ನು ಸಾದ್ಯಾಪೂರ ಕ್ರಾಸ್ ಬಳಿ ಗುಂಪೊಂದು ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಸುಮಾರು 9ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಾಪಣ್ಣನ ಮೇಲೆ ಹತ್ತು ವರ್ಷಗಳ ಹಿಂದೆ ಹತ್ಯೆಯತ್ನ ನಡೆದಿತ್ತಾದರೂ, ಆತ ಆಗ ಬಚಾವಾಗಿದ್ದ.ಮಾ.16 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಶಹಾಪುರದ ಭೀಮರಾಯನ ಗುಡಿಯಿಂದ ಮಾಪಣ್ಣ ತನ್ನ ಸ್ನೇಹಿತ ಅಲೀಸಾಬ್ ಜೊತೆ ಬೈಕಿನಲ್ಲಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಸಾದ್ಯಾಪೂರ ಕ್ರಾಸ್ ಬಳಿ ಬೈಕ್ ಅಡ್ಡಗಟ್ಟಿ ಬಂದು ಕಾರದಪುಡಿ ಎರಚಿ, ಕೊಚ್ಚಿ ಕೊಲೆ ಮಾಡಲಾಗಿತ್ತು. ಮಾಪಣ್ಣನ ಹೆಂಡತಿ ಲಕ್ಷ್ಮೀ ನೀಡಿದ ಮೇರೆಗೆ, 7 ಜನರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು, ಈಗ ಮೂವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಡಾವಾ ಹೋಟೆಲ್ ವ್ಯಾಪಾರಿ ಹುಸೇನಿ ಪಟೇಲ್ (37), ಶಿವಪ್ಪಗೌಡ ಮಳಗೊಂಡ (55) ಹಾಗೂ ಸಂಚು ಹೂಡಿದ ಆರೋಪದಡಿ ಮೊಹ್ಮದ್ ರಿಯಾಜ್ ಗೋಗಿ (35) ಇವರುಗಳನ್ನು ಬಂಧಿಸಲಾಗಿದೆ.
ಇದೇ ವೇಳೆ, ಮಾಪಣ್ಣನನ್ನು ಕುಳ್ಳಿರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ಸ್ನೇಹಿತ ಅಲೀಸಾಬ್ (55) ತನ್ನ ಜೀವ ರಕ್ಷಿಸಿಕೊಳ್ಳುವ ಸಲುವಾಗಿ ಗಾಬರಿಯಿಂದ ಓಡೋಡಿ ಬಂದು ಮನೆ ಸೇರಿದ್ದ. ಆದರೆ, ಈ ಕೊಲೆ ಹಿಂದೆ ಅಲೀಸಾಬ್‌ನ ಕೈವಾಡವಿದೆ, ಈತನೇ ಕೊಲೆಗಾರರಿಗೆ ಸುಳಿವು ನೀಡಿದ್ದ ಎಂಬುದಾಗಿ ಆಕ್ರೋಶಗೊಂಡಿದ್ದ ಮಾಪಣ್ಣ ಪುತ್ರ ಹಾಗೂ ಸಂಬಂಧಿಕರು ಅಲೀಸಾಬ್ ಅಡಗಿಕೊಂಡಿದ್ದ ಮನೆಗೇ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ, ಆತನನ್ನೂ ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅಲೀಸಾಬ್‌ನ ಪತ್ನಿ ರಾಬಿಯಾಬೇಗಂ 8 ಜನರ ವಿರುದ್ಧ ದೂರು ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಭು ಭೂತಾಳಿ (27) ಹಾಗೂ ಶ್ರೀಶೈಲ ಬಡಿಗೇರ್ (22) ಎಂಬಿಬ್ಬರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇದೇ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ.