ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಡೀ ವಿಶ್ವಕ್ಕೆ ಕರ್ಮಭೂಮಿ (ಭಾರತ)ಯ ಸತ್ವವನ್ನು ಪರಿಚಯಿಸಿದ ಕೈವಾರ ತಾತಯ್ಯ ಸಮಸಮಾಜದ ಪರಿಕಲ್ಪನೆಯನ್ನು ಹೊಂದಿದ್ದರು ಎಂದು ಮೈಸೂರಿನ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಾರುತಿ ಪ್ರಸನ್ನ ಅಭಿಪ್ರಾಯಪಟ್ಟರು.ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೈವಾರ ತಾತಯ್ಯ ತತ್ವಜ್ಞಾನಿಯಷ್ಟೆ ಅಲ್ಲ ಜಗತ್ತಿನ ಆಗು-ಹೋಗುಗಳನ್ನು ಅರಿಯುವ ಕಾಲಜ್ಞಾನಿಯು ಆಗಿದ್ದರು. ಹಲವು ಪವಾಡಗಳನ್ನು ಮಾಡಿದ್ದರು. ಜೀವನಕ್ಕಾಗಿ ಬಳೆ ವ್ಯಾಪಾರ ವೃತ್ತಿಯನ್ನು ಅವಲಂಬಿಸಿದ್ದ ತಾತಯ್ಯರು ಹೆಂಗೆಳೆಯರಿಗೆ ಬಳೆ ತೊಡಿಸುವುದು ಶುಭಕಾರ್ಯವೆಂದು ತಿಳಿದಿದ್ದರು. ಮಹಿಳೆಯರಲ್ಲಿ ಮಾತೃಸ್ವರೂಪಿ ಹಾಗೂ ಸಹೋದರತೆ ಕಂಡರು. ಅವರು ರಚಿಸಿದ ತತ್ವಪದ ಹಾಗೂ ಕೀರ್ತನೆಗಳಲ್ಲಿ ಸಮಸಮಾಜದ ಕಲ್ಪನೆ ಇದೆ ಎಂದರು.ಬಣಜಿಗ ಎಂದರೇ ಬಂಧವನ್ನು ಪ್ರೀತಿಯಿಂದ ಉಪಚರಿಸುವವರು ಎಂದರ್ಥ. ಇಂದಿಗೂ ತನ್ನ ಶ್ರೇಷ್ಠತೆ ಕಾಪಾಡಿಕೊಂಡು ವ್ಯಾಪಾರದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯ ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂಚೂಣಿಗೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯಕ್ಕೆ ಮೀಸಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕೈವಾರ ತಾತಯ್ಯ ಅವರ ತತ್ವ, ಆದರ್ಶ ಮೌಲ್ಯಗಳ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.ನಗರಸಭಾ ಅಧ್ಯಕ್ಷ ಎಸ್.ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಶುಭಾಷಯಗಳನ್ನು ತಿಳಿಸಿದರು. ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಕೈವಾರ ತಾತಯ್ಯ ಅವರು ಬಳೆ ತೊಡಿಸುವ ಕಾಯಕ ಮಾಡುತ್ತಿದ್ದು, ಆದಾಯವನ್ನು ಬಯಸದೆ ವೃತ್ತಿ ಜೀವನ ನಡೆಸಿದವರು. ಸತ್ಯದ ಮಾರ್ಗವನ್ನು ಅನುಸರಿಸಿ ನಡೆದವರು. ಬಡತನದ ಬದುಕಿನಲ್ಲಿಯೂ ಸಿರಿವಂತಿಕೆ ಕಂಡುಕೊಂಡ ಕೈವಾರ ತಾತಯ್ಯ ಅವರ ಆದರ್ಶ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಡಿಸಿ ಗೀತಾ ಹುಡೇದ ಮಾತನಾಡಿ, ಕೈವಾರ ತಾತಯ್ಯರ ತತ್ವಾದರ್ಶಗಳು, ಕಾಲಜ್ಞಾನ ನಮಗೆ ದಾರಿದೀಪವಾಗಿದೆ. ದೇಶದ, ಸಮಾಜದ ಒಳಿತಿಗಾಗಿ ಕೊಡುಗೆ ನೀಡಿರುವ ಎಲ್ಲಾ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶ ಚಿಂತನೆಗಳ ಅರಿವನ್ನು ಮೂಡಿಸಲು ಸರ್ಕಾರ ನೆರವು ನೀಡುತ್ತಿದೆ. ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಜನಪದ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ ಕೈವಾರ ತಾತಯ್ಯ ಕುರಿತ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉದಯ್‌ಕುಮಾರ್, ಮುಖಂಡರಾದ ಜಿ.ವಿ. ಶ್ರೀನಿವಾಸು, ವೈ.ವಿ. ಲೋಕನಾಥ್, ಸಿ.ಎನ್. ರಂಗರಾಮು, ಸಿ.ಜಿ. ಚಂದ್ರಶೇಖರ್, ಎನ್. ಸುರೇಶ್, ಸಿ. ರಂಗರಾಜು, ಆರ್. ಸುಬ್ರಮಣ್ಯ, ಪದ್ಮಾ ಪುರುಷೋತ್ತಮ್, ಮೋಹನ್, ಇತರರು, ಕಾರ್ಯಕ್ರಮದಲ್ಲಿ ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯದಿಂದ ವಿವಿಧ ಕಲಾತಂಡಗಳೊಂದಿಗೆ ಆರಂಭವಾದ ಅಲಂಕೃತ ಬೆಳ್ಳಿರಥದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಳಿಕ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯಗೊಂಡಿತು.