ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಬಳ್ಳಾರಿಯ ಗೋಪಿಚಂದ್ ಲಿಂಗುಟ್ಲ ಆಯ್ಕೆ

KannadaprabhaNewsNetwork |  
Published : Oct 18, 2026, 02:45 AM IST
ನನ್ನ ಬಳಿ ಐದು ಗೋಪಿಚಂದ್ ಲಿಂಗುಟ್ಲು ತರಬೇತಿ ಪಡೆದಿದ್ದಾರೆ. ಮತ್ತಷ್ಟೂ ಸಾಧನೆ ಮಾಡಲಿ. ಬಳ್ಳಾರಿ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂಬ ನನ್ನ ಕನಸು. ಗೋವಿಚಂದ್‌ಗೆ ಒಳಿತಾಗಲಿ ಎಂದು ಹಾರೈಸುವೆ.  | Kannada Prabha

ಸಾರಾಂಶ

ಗೋಪಿಚಂದ್ ಈಜು ಸಾಧನೆಯ ಪಯಣ ಆರಂಭವಾಗಿದ್ದು 2016ರಲ್ಲಿ. ಬಳ್ಳಾರಿಯ ಸರ್ಕಾರಿ ಈಜುಕೊಳದಲ್ಲಿ ತರಬೇತುದಾರರಾದ ರಜನಿ ಲಕ್ಕ ಮಾರ್ಗದರ್ಶನದಲ್ಲಿ ಉಚಿತ ಈಜು ತರಬೇತಿ ಪಡೆಯಲು ಆರಂಭಿಸಿದರು

ಮಂಜುನಾಥ ಕೆ.ಎಂ. ಬಳ್ಳಾರಿ

ಸರ್ಕಾರಿ ಈಜುಕೊಳದಲ್ಲಿ ಉಚಿತ ತರಬೇತಿ ಪಡೆಯುವ ಮೂಲಕ ಈಜು ಕ್ರೀಡೆಗೆ ಕಾಲಿಟ್ಟ ಬಳ್ಳಾರಿಯ ಯುವಕನೊಬ್ಬ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವ ಕನಸಿನೊಂದಿಗೆ ಮತ್ತೊಂದು ಮಹತ್ವದ ಕ್ರೀಡಾಕೂಟಕ್ಕೆ ಸಜ್ಜಾಗಿದ್ದಾರೆ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಸಾಧಿಸುವ ಛಲವನ್ನೇ ಬಂಡವಾಳವಾಗಿಸಿಕೊಂಡು ಈಜು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ಪ್ಯಾರಾ ಈಜುಪಟು ಗೋಪಿಚಂದ್ ಲಿಂಗುಟ್ಲ ಇದೀಗ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಆಯ್ಕೆಯಾಗುವ ಮೂಲಕ ಗಣಿನಾಡಿಗೆ ಹೆಮ್ಮೆ ತಂದಿದ್ದಾರೆ.

ಜಪಾನ್‌ನ ಐಚಿ-ನಾಗೋಯಾದಲ್ಲಿ ಅ. 18ರಿಂದ 24ರವರೆಗೆ ನಡೆಯಲಿದ್ದು, 5ನೇ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಗೋಪಿಚಂದ್ ಆಯ್ಕೆಯಾಗಿದ್ದಾರೆ. 400 ಮೀಟರ್ ಫ್ರೀಸ್ಟೈಲ್ ಹಾಗೂ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗಗಳಲ್ಲಿ ಸ್ಪರ್ಧಿಸಲಿರುವ ಅವರು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಉಚಿತ ತರಬೇತಿ: ಗೋಪಿಚಂದ್ ಈಜು ಸಾಧನೆಯ ಪಯಣ ಆರಂಭವಾಗಿದ್ದು 2016ರಲ್ಲಿ. ಬಳ್ಳಾರಿಯ ಸರ್ಕಾರಿ ಈಜುಕೊಳದಲ್ಲಿ ತರಬೇತುದಾರರಾದ ರಜನಿ ಲಕ್ಕ ಮಾರ್ಗದರ್ಶನದಲ್ಲಿ ಉಚಿತ ಈಜು ತರಬೇತಿ ಪಡೆಯಲು ಆರಂಭಿಸಿದ ಅವರು, ಕೆಲವೇ ವರ್ಷಗಳಲ್ಲಿ ಸ್ಪರ್ಧಾತ್ಮಕ ಈಜಿನಲ್ಲಿ ತಮ್ಮದೇ ಛಾಪು ಮೂಡಿಸಿದರು. 2017ರಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಗೋಪಿಚಂದ್ ಈವರೆಗೆ ಬರೋಬ್ಬರಿ 60 ಚಿನ್ನ ಹಾಗೂ 13 ಬೆಳ್ಳಿ ಪದಕ ಜಯಿಸಿದ್ದಾರೆ. ಒಟ್ಟು 73 ಪದಕಗಳ ಸಾಧನೆ ಅವರ ನಿರಂತರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಈಜಿನಲ್ಲಿ ಮತ್ತಷ್ಟು ಪರಿಣತಿ ಸಾಧಿಸಲು 2020ರಿಂದ ಬೆಂಗಳೂರಿನ ಜೀ ಅಕಾಡೆಮಿಯಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಶರತ್ ಗಾಯಕ್ವಾಡ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿರುವುದು ಗೋಪಿಚಂದ್ ಕ್ರೀಡಾ ಬದುಕಿಗೆ ಹೊಸ ಆಯಾಮ ನೀಡಿದೆ.

6 ಅಂತಾರಾಷ್ಟ್ರೀಯ ಕ್ರೀಡಾಕೂಟ: 2021ರಲ್ಲಿ ಬಹ್ರೇನ್‌ನಲ್ಲಿ ನಡೆದ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಅವರು, 2022ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ನಡೆದ ಓಪನ್ ಇಂಟರ್‌ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು. 2023ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ಹಾಗೂ ಅದೇ ವರ್ಷ ದಕ್ಷಿಣ ಕೊರಿಯಾದ ಏಷ್ಯನ್ ಯೂತ್ ಪ್ಯಾರಾ ಸ್ಪೋರ್ಟ್ಸ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು. 2025ರಲ್ಲಿ ಸ್ಪೇನ್‌ನ ಬಾರ್ಸಿಲೋನಾದ ವಿಶ್ವ ಪ್ಯಾರಾ ಈಜು ಸರಣಿ ಮತ್ತು 2026ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಮೂಲ್ಯ ಅನುಭವ ಸಂಪಾದಿಸಿದ್ದಾರೆ.

ನನ್ನ ಬಳಿ ಐದು ವರ್ಷ ಗೋಪಿಚಂದ್ ಲಿಂಗುಟ್ಲು ತರಬೇತಿ ಪಡೆದಿದ್ದಾರೆ. ಮತ್ತಷ್ಟೂ ಸಾಧನೆ ಮಾಡಲಿ. ಬಳ್ಳಾರಿ ಜಿಲ್ಲೆಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂಬ ನನ್ನ ಕನಸು. ಗೋವಿಚಂದ್‌ಗೆ ಒಳಿತಾಗಲಿ ಎಂದು ಹಾರೈಸುವೆ ಎಂದು ಬಳ್ಳಾರಿ ಹಿರಿಯ ಈಜು ತರಬೇತಿದಾರರುರಜನಿ ಲಕ್ಕ ತಿಳಿಸಿದ್ದಾರೆ.ಗೋಪಿಚಂದ್ ಸಾಧನೆಯ ಹೆಜ್ಜೆಗುರುತು

2016: ಬಳ್ಳಾರಿಯ ಸರ್ಕಾರಿ ಈಜುಕೊಳದಲ್ಲಿ ಉಚಿತ ತರಬೇತಿ ಆರಂಭ

2017: ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭ

2020: ಶರತ್ ಗಾಯಕ್ವಾಡ್ ಮಾರ್ಗದರ್ಶನದಲ್ಲಿ ಉನ್ನತ ತರಬೇತಿ

2021–25: ಏಷ್ಯನ್ ಹಾಗೂ ವಿಶ್ವಮಟ್ಟದ ವಿವಿಧ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ

2026: ಆಸ್ಟ್ರೇಲಿಯಾದ ವಿಶ್ವ ಪ್ಯಾರಾ ಈಜು ಸರಣಿಯಲ್ಲಿ ಬೆಳ್ಳಿ ಪದಕ

ಒಟ್ಟು ಸಾಧನೆ: 60 ಚಿನ್ನ, 13 ಬೆಳ್ಳಿ ಪದಕಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಡಿತರ ಚೀಟಿದಾರರ ಇ-ಕೆವೈಸಿ ಗಡುವು ವಿಸ್ತರಿಸಿ
ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ