ಕಡು ಬಡತನದ ನಡುವೆ ಸತತ ಪರಿಶ್ರಮದ ಅಧ್ಯಯನದಿಂದ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಅರ್ಹತೆ ಪಡೆದಿರುವ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಈರಪ್ಪ ಕಣವಿ ಅವರ ಪುತ್ರ ಭರತ್ ಕಣವಿ ಅವರಿಗೆ ನಗರದ ಶ್ರೀ ಸಾಯಿ ಸರ್ವೀಸ್ ಟ್ರಸ್ಟ್ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಹಾಗೂ ಪತ್ನಿ ನಾರಾ ಶೈಲಜಾ ರೆಡ್ಡಿ ಅವರು ₹75 ಸಾವಿರ ಆರ್ಥಿಕ ನೆರವು ನೀಡಿದರು.
ಬಳ್ಳಾರಿ: ಕಡು ಬಡತನದ ನಡುವೆ ಸತತ ಪರಿಶ್ರಮದ ಅಧ್ಯಯನದಿಂದ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಅರ್ಹತೆ ಪಡೆದಿರುವ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಈರಪ್ಪ ಕಣವಿ ಅವರ ಪುತ್ರ ಭರತ್ ಕಣವಿ ಅವರಿಗೆ ನಗರದ ಶ್ರೀ ಸಾಯಿ ಸರ್ವೀಸ್ ಟ್ರಸ್ಟ್ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಹಾಗೂ ಪತ್ನಿ ನಾರಾ ಶೈಲಜಾ ರೆಡ್ಡಿ ಅವರು ₹75 ಸಾವಿರ ಆರ್ಥಿಕ ನೆರವು ನೀಡಿದರು.
ಆಗಸ್ಟ್ 26ರಂದು ಕನ್ನಡಪ್ರಭದಲ್ಲಿ "ನೆರವಿನ ನಿರೀಕ್ಷೆಯಲ್ಲಿ ವಿದ್ಯಾರ್ಥಿ " ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿರುವ ನಾರಾ ಪ್ರತಾಪ ರೆಡ್ಡಿ ಕುಟುಂಬ ಹಾಗೂ ಟ್ರಸ್ಟ್‌ನ ಸದಸ್ಯರು ವಿದ್ಯಾರ್ಥಿಗೆ ಚೆಕ್ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿದ ನಾರಾ ಶೈಲಜಾ ರೆಡ್ಡಿ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳ್ಳಲಿ. ಬರುವ ದಿನಗಳಲ್ಲಿ ಜನಮುಖಿ ವೈದ್ಯನಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರಲ್ಲದೆ, ಶ್ರೀಸಾಯಿ ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ಹಾಗೂ ಶಿಕ್ಷಣದ ನೆರವು ನೀಡುತ್ತ ಬರಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗಲಿದೆ. ಜೀವನದಲ್ಲಿ ಹಣ ಗಳಿಸುವುದೊಂದೇ ಗುರಿಯಾಗಬಾರದು. ದುಡಿದ ಗಳಿಕೆಯಲ್ಲಿ ಒಂದಷ್ಟು ಸಮಾಜಸೇವೆಗೆ ಮುಡಿಪಾಗಿಡಬೇಕು. ಆಗ ಮಾತ್ರ ಜೀವನ ಸಾರ್ಥಕ ಎನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪತಿ ನಾರಾ ಪ್ರತಾಪರೆಡ್ಡಿ ಅವರ ಸಲಹೆಯಂತೆ ಸೇವಾ ಕೈಂಕಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಮಾಜಿ ಬುಡಾ ಅಧ್ಯಕ್ಷ ಹಾಗೂ ಶ್ರೀ ಸಾಯಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ನಾರಾ ಪ್ರತಾಪ ರೆಡ್ಡಿ ಮಾತನಾಡಿ, ಹೊಳಲು ಗ್ರಾಮದ ವಿದ್ಯಾರ್ಥಿ ಭರತ್ ಕಣವಿ ಅವರು ಶಿಕ್ಷಣ ಮುಂದುವರಿಕೆಗೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬ ಸುದ್ದಿಯನ್ನು ಕನ್ನಡಪ್ರಭದಲ್ಲಿ ಓದಿದೆ. ಸಂಕಷ್ಟದಲ್ಲೂ ಶೈಕ್ಷಣಿಕ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನೆರವು ನೀಡಲಾಗಿದೆ. ಮುಂಬರುವ ದಿನಗಳಲ್ಲೂ ವಿದ್ಯಾರ್ಥಿ ಭರತ್ ಕಣವಿ ಅವರಿಗೆ ಆರ್ಥಿಕ ನೆರವು ನೀಡಲಾಗುವುದು. ಆತನ ಶೈಕ್ಷಣಿಕ ಪ್ರಗತಿಗೆ ಸಹಕರಿಸಲಾಗುವುದು ಎಂದು ತಿಳಿಸಿದರು.
ರೆಡ್ಡಿಜನ ಸಂಘದ ಕಾರ್ಯದರ್ಶಿ ತಿಮ್ಮಾರೆಡ್ಡಿ, ಖಜಾಂಚಿ ಹೇಮಚಂದ್ರ ರೆಡ್ಡಿ, ನಿರ್ದೇಶಕ ಮರಿಸ್ವಾಮಿ ರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಕನ್ನಡಪ್ರಭ ವಿಶೇಷ ವರದಿಗಾರ ಮಂಜುನಾಥ ಕೆ.ಎಂ. ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.