ಬಳ್ಳಾರಿ: ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯ ಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ನಗರದ ರಾಘವೇಂದ್ರ ಕಾಲನಿಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ಜರುಗಿದವು. ಧ್ವಜಾರೋಹಣ, ಸ್ತಂಭಪೂಜೆ, ಗಣಹೋಮ, ಪಡಿಪೂಜೆಗಳು ನಡೆದವು. ಅಯ್ಯಪ್ಪಸ್ವಾಮಿ ದೇವಾಲಯ ಭಕ್ತರಿಂದ ತುಂಬಿತ್ತು.
ತಾಲೂಕಿನ ಚೇಳ್ಳಗುರ್ಕಿ ಎರ್ರಿತಾತ ದೇವಸ್ಥಾನದಲ್ಲಿ ಸಂಕ್ರಾಂತಿ ಅಂಗವಾಗಿ ಧನುರ್ಮಾಸ ವಿಶೇಷ ಪೂಜೆ ಜರುಗಿತು. ಬೆಳಗಿನ ಜಾವ 4 ಗಂಟೆಯಿಂದಲೇ ಪೂಜೆ ಶುರುಗೊಂಡಿತು. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ನೂರಾರು ಭಕ್ತರು ಪಾಲ್ಗೊಂಡು ಎರ್ರಿತಾತನ ದರ್ಶನ ಪಡೆದು ಪುನೀತಗೊಂಡರು. ಬಳಿಕ ಎರ್ರಿತಾತ ನಾಮಾವಳಿ, ಭಜನೆ ಹಾಗೂ ಪ್ರಸಾದ ವಿತರಣೆ ಕಾರ್ಯಗಳು ನಡೆದವು.ನಗರದ ಅಧಿದೇವತೆ ಕನಕ ದುರ್ಗಮ್ಮ, ಕೋಟೆ ಮಲ್ಲೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆಗಳು ನಡೆದವು. ಪ್ರಮುಖ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಸಡಗರಕ್ಕೆ ಯಾವುದೇ ಕೊರತೆ ಕಂಡುಬರಲಿಲ್ಲ. ಹೂವು, ಹಣ್ಣುಗಳ ಬೆಲೆ ಏರಿಕೆ ನಡುವೆ ಎಲ್ಲೆಡೆ ಹಬ್ಬದ ಸಂಭ್ರಮವಿತ್ತು. ರೈತರು ಎತ್ತುಗಳ ಮೈ ತೊಳೆದು, ಪೂಜೆ ಸಲ್ಲಿಸಿದರು.
ವಿಶೇಷ ಹಬ್ಬ: ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷವೂ ಸಡಗರ, ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಮನೆಯ ಮುಂದೆ ರಂಗೋಲಿ ಹಾಕಿ, ಪೂಜೆ ಸಲ್ಲಿಸಲಾಗುತ್ತದೆ. ಇದು ಮಹಿಳೆಯರಿಗೆ ವಿಶೇಷ ಹಬ್ಬ ಎಂದು ಬಳ್ಳಾರಿ ಪಾರ್ವತಿನಗರದ ನಿವಾಸಿಗಳಾದ ಶರಣಮ್ಮ, ಪ್ರೇಮಾ, ಮಂಗಳಮ್ಮ ತಿಳಿಸಿದರು.