ಶಿರಸಿ: ತಾಲೂಕಿನ ಶಿರಗುಣಿಯಲ್ಲಿ ಮನೆಯೊಂದರಲ್ಲಿ ಕಾಲು ಜಾರಿ ಬಿದ್ದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಬಿದಿರಿನ ಗಳದಲ್ಲಿ ಕಟ್ಟಿ ಜೋಲಿ ಮಾಡಿ ಜೀವ ಪಣಕ್ಕಿಟ್ಟು ೪೦ ಕಿ.ಮೀ. ಕ್ರಮಿಸಿ ಚಿಕಿತ್ಸೆ ಕೊಡಿಸಿದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.
ಶಿರಗುಣಿ ಗ್ರಾಮದ ಮಾದೇವಿ ಸುಬ್ರಾಯ ಹೆಗಡೆ(೭೫) ಎಂಬವರು ಮನೆಯ ಅಂಗಳದಲ್ಲಿ ಮಳೆಗೆ ಕಾಲುಜಾರಿ ಬಿದ್ದು ಕಾಲು ಮುರಿದಿದೆ. ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಗೆ ಕರೆ ಮಾಡಲು ನೆಟ್‌ವರ್ಕ್ ಸಂಪರ್ಕವೇ ಇಲ್ಲ. ಇನ್ನು ಮಳೆಯಿಂದ ವಿದ್ಯುತ್ ಸಂಪರ್ಕವೂ ಇಲ್ಲ. ಇನ್ನು ತಕ್ಷಣ ವಾಹನದಲ್ಲಿ ಕರೆದೊಯ್ಯಲು ರಸ್ತೆಯೇ ಸರಿ ಇಲ್ಲದೇ ಬಿದಿರುಗಳಲ್ಲಿ ವೃದ್ಧೆಯನ್ನು ಜೋಲಿ ಮಾಡಿ ಕಟ್ಟಿ ಭುಜದಲ್ಲಿ ಹೊತ್ತು ದೂರ ದುರ್ಗಮ ಹಾದಿಯಲ್ಲಿ ಜೀವ ಪಣಕ್ಕಿಟ್ಟು ಮಳೆಯಲ್ಲೇ ತೆರಳಿದ್ದಾರೆ. ನಂತರ ಸಂಪರ್ಕದ ರಸ್ತೆಗೆ ಬಂದು ಸಿಕ್ಕ ವಾಹನದಲ್ಲಿ ಹಾಕಿಕೊಂಡು ಶಿರಸಿಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.ತಾಲೂಕಿನ ವಾನಳ್ಳಿ ಗ್ರಾಪಂ ವ್ಯಾಪ್ತಿಯ ಮುಸ್ಕಿ, ಶಿರಗುಣಿ ಗ್ರಾಮವು ಕರೆಒಕ್ಕಲಿಗರು, ಸಿದ್ದಿ ಹಾಗೂ ಹವ್ಯಕ ಸಮುದಾಯದಿಂದ ಕೂಡಿರುವ ತೀರಾ ಹಿಂದುಳಿದ ಗುಡ್ಡಗಾಡುಗಳಿಂದ ಕೂಡಿರುವ ಗ್ರಾಮಗಳಾಗಿವೆ. ಈ ಗ್ರಾಮಗಳಿಗೆ ಕಕ್ಕಳ್ಳಿಯಿಂದ ಮುಸ್ಕಿ- ಶಿರಗುಣಿವರೆಗೆ ೫ ಕಿ.ಮೀ. ಮಣ್ಣಿನ ರಸ್ತೆಯಿದೆ. ಪ್ರತಿ ವರ್ಷ ಮಳೆ ಬಂತು ಎಂದರೆ ವಾಹನವಿರಲಿ, ಹೆಜ್ಜೆ ಹಾಕುವುದು ಕೂಡ ಕಷ್ಟಕರ. ರಸ್ತೆ ಮಾಡಿಕೊಡುವಂತೆ ಕಚೇರಿಗಳಿಗೆ ಇಲ್ಲಿನ ಜನ ಚಪ್ಪಲಿ ಸವೆಸಿದ್ದಾರೆ. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರಿಗೂ ಮನವಿ ಮಾಡಿದ್ದಾರೆ. ಆದರೆ ಗ್ರಾಮಕ್ಕೆ ರಸ್ತೆ ಮಾಡುವ ಔದಾರ್ಯ ಮಾತ್ರ ತೋರಿಲ್ಲ. ಮಳೆ ಪ್ರಾರಂಭವಾದಾಗಿನಿಂದ ಈ ಗ್ರಾಮದ ಜನ ನಗರ ಸಂಪರ್ಕ ಕಡಿತವಾಗುತ್ತದೆ. ಈ ಗ್ರಾಮದಲ್ಲಿ ೮೦ಕ್ಕೂ ಹೆಚ್ಚು ಹವ್ಯಕ ಮನೆಗಳಿವೆ. ಊರಿನಲ್ಲಿ ಅಂಗನವಾಡಿ ಇದೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ.
ಮಳೆ ಹೆಚ್ಚಾದಾಗ ಕೆಸರು, ನೀರು ತುಂಬಿಕೊಂಡು ಮಕ್ಕಳು ಶಾಲೆಗೆ ತೆರಳುವುದೇ ಕಷ್ಟದಾಯಕವಾಗಿದೆ. ಈ ಗ್ರಾಮಕ್ಕೆ ಯಾವ ಸೌಕರ್ಯ ಕೊಡದಿದ್ದರೂ ಕೊನೆ ಪಕ್ಷ ರಸ್ತೆ ಮಾಡಿಕೊಟ್ಟರೆ ಅನುಕೂಲವಾಗಲಿದೆ. ಇದರಿಂದ ಬಿದಿರಿನ ಗಳ ನಂಬಿ ಬದುಕು ಬಿಗಿಹಿಡಿದು ಕುಳಿತಿರುವ ಈ ಗ್ರಾಮದ ಜನ ನಿಟ್ಟುಸಿರು ಬಿಡಬಹುದಾಗಿದೆ. ಇನ್ನಾದರೂ ಜಡ್ಡು ಹಿಡಿದ ಆಡಳಿತ, ಸರ್ಕಾರ ಇತ್ತ ಗಮನ ಹರಿಸಿ ರಸ್ತೆ ಕಲ್ಪಿಸಲಿ ಎನ್ನುತ್ತಾರೆ ಸ್ಥಳೀಯರು.ಸ್ವಾತಂತ್ರ್ಯ ಲಭಿಸಿ 78 ವರ್ಷವಾದರೂ ಕಕ್ಕಳ್ಳಿಯಿಂದ ಮುಸ್ಕಿ ವರೆಗಿನ 5 ಕಿ.ಮೀ. ರಸ್ತೆ ಭಾಗ್ಯ ದೊರೆತಿಲ್ಲ. ಮಳೆಗಾಲದಲ್ಲಿ ತೀರಾ ಸಮಸ್ಯೆಯಾಗಿದೆ. ಯಾವ ಪಕ್ಷವನ್ನಾಗಿ, ವ್ಯಕ್ತಿಯನ್ನಾಗಲಿ ದೂಷಿಸುವ ಉದ್ದೇಶವಿಲ್ಲ. ಶಾಸಕರು, ಸಂಸದರು, ಅಧಿಕಾರಿಗಳು ಇತ್ತ ನೋಡಿ, ಊರಿನ ಕಷ್ಟ ಅರಿತು ಸರ್ವಋತು ರಸ್ತೆಯನ್ನಾಗಲಿ ಮಾಡಲಿ ಎನ್ನುತ್ತಾರೆ ಶಿರಗುಣಿ ನಿವಾಸಿ ಸಂದೇಶ ಭಟ್ಟ.