ಬಮೂಲ್‌ ಚುನಾವಣೆ: ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್‌ ಗೆಲುವಿನ ವಿಶ್ವಾಸ

KannadaprabhaNewsNetwork | Published : May 21, 2025 12:01 AM
ಕೆಲ ಪಟ್ಟಭದ್ರರು ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್‌ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಬಮೂಲ್‌ ಚುನಾವಣೆಗೆ ಪಕ್ಷದಿಂದ ಸೂಕ್ತ ಅಭ್ಯರ್ಥಿ ಇಲ್ಲ ಎಂದೂ ಅಪಪ್ರಚಾರ ಮಾಡಿದ್ದರು. ಆದರೆ ಈಗ ಪ್ರಬಲ ಹಾಗೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಲ್ಲ ಅಪಪ್ರಚಾರಗಳಿಗೂ ತೆರೆ ಎಳೆಯಲಾಗಿದೆ.
Follow Us

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇದೇ ಮೇ.25ರಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸ್ಥಾನದ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಜೆಡಿಎಸ್‌ನಿಂದ ಹುಸ್ಕೂರು ಆನಂದ್‌ ಒಮ್ಮತದ ಅಭ್ಯರ್ಥಿಯಾಗಿದ್ದು, ಗೆಲುವು ನಿಶ್ಚಿತ ಎಂದು ಬೆಂ.ಗ್ರಾ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ.ಮುನೇಗೌಡ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಲ ಪಟ್ಟಭದ್ರರು ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್‌ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಬಮೂಲ್‌ ಚುನಾವಣೆಗೆ ಪಕ್ಷದಿಂದ ಸೂಕ್ತ ಅಭ್ಯರ್ಥಿ ಇಲ್ಲ ಎಂದೂ ಅಪಪ್ರಚಾರ ಮಾಡಿದ್ದರು. ಆದರೆ ಈಗ ಪ್ರಬಲ ಹಾಗೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಲ್ಲ ಅಪಪ್ರಚಾರಗಳಿಗೂ ತೆರೆ ಎಳೆಯಲಾಗಿದೆ. ಪಕ್ಷದ ಅಭ್ಯರ್ಥಿಯ ಗೆಲುವು ಖಂಡಿತ ಎಂದು ಅವರು ತಿಳಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ಬಿಜೆಪಿಯವರು ಹುಸ್ಕೂರು ಆನಂದ್ ಅವರಿಗೆ ವಿಪರೀತ ತೊಂದರೆ ಕೊಟ್ಟಿದ್ದಾರೆ ಎಂದ ಅವರು, ಜೆಡಿಎಸ್‌ನ ಹಿರಿಯ ಮುಖಂಡರಾಗಿದ್ದ ದಿವಂಗತ ಎಚ್.ಅಪ್ಪಯ್ಯಣ್ಣನವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಗೆಲ್ಲಬೇಕು. ದೊಡ್ಡಬಳ್ಳಾಪುರ ತಾಲೂಕು ಯಾವುದೇ ಚುನಾವಣೆ ಬಂದರೂ ವಿಶೇಷ ಪಾತ್ರ ವಹಿಸುತ್ತದೆ. ಈ ಹಿಂದೆ ಬಮೂಲ್ ಚುನಾವಣೆಯಲ್ಲಿ ಅಪ್ಪಯ್ಯಣ್ಣನವರು ನೋವು ಅನುಭವಿಸಿದ್ದರು. ಆ ನೋವಿನಿಂದ ಹೊರ ಬರಲು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದ್ದು, ಆ ಕುರಿತು ಆಶಾಭಾವನೆ ಹೊಂದಿರುವುದಾಗಿ ಅವರು ತಿಳಿಸಿದರು.

ಅಭ್ಯರ್ಥಿ ಹುಸ್ಕೂರು ಆನಂದ್ ಮಾತನಾಡಿ, ಕೆಲವರು ಬೇಕಂತಲೇ ತಮ್ಮ ಮೇಲೆ ವಿವಿಧ ಕೇಸುಗಳನ್ನು ಹಾಕಿ ಕಿರುಕುಳ ನೀಡಿದ್ದರು. ಆದರೆ ಸ್ಪರ್ಧೆ ಮಾಡಲು ಕೋರ್ಟ್ ನಿಂದ ಆದೇಶ ತರಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರು ಹಾಗೂ ಅಸಂಖ್ಯಾತ ಮುಖಂಡರು, ಕಾರ್ಯಕರ್ತರು ತಮ್ಮನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಅವರ ನಿರ್ಧಾರಕ್ಕೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿವೃದ್ದಿ ಪರ ಆಡಳಿತ, ರೈತಪರ ಯೋಜನೆಗಳ ಜಾರಿಗೆ ಬಮೂಲ್‌ ವತಿಯಿಂದ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ದೂರಗಾಮಿ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಎ.ನರಸಿಂಹಯ್ಯ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಜಿ.ವಿಜಯಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಬೆಂ.ಗ್ರಾ ಮಹಿಳಾ ವಕ್ತಾರರಾದ ಶಶಿಕಲಾ, ಹೋಬಳಿ ಅಧ್ಯಕ್ಷ ಜಗನ್ನಾಥಾಚಾರ್, ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ರಂಗಸ್ವಾಮಿ, ಸತೀಶ್, ಸಿದ್ದಪ್ಪ, ರಾಜಗೋಪಾಲ್, ಜಗದೀಶ, ಅಶ್ವತ್ಥನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.