-ಬೀಗರೂಟ ಹೆಸರಲ್ಲಿ ಅನಗತ್ಯ ಖರ್ಚು
ಮದುವೆ ಸೇರಿದಂತೆ ಶುಭ, ಸಮಾರಂಭಗಳಲ್ಲಿ ಅದ್ಧೂರಿ ಬೀಗರೂಟದ ಹೆಸರಿನಲ್ಲಿ ನಡೆಯುವ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ತಾಲೂಕಿನ ಗೆಂಡ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಗ್ರಾಮಸ್ಥರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ, ಅದ್ಧೂರಿ ಬೀಗರೂಟ ಪದ್ಧತಿಯನ್ನು ನಿಷೇಧಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.ಬೀಗರೂಟದ ಹೆಸರಿನಲ್ಲಿ ಅನಗತ್ಯ ಹಣ ವ್ಯಯಿಸುವ ಬದಲಾಗಿ ಅದೇ ಹಣವನ್ನು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸಮಾಜದಲ್ಲಿ ಆರ್ಥಿಕ ಶಿಸ್ತು ಬೆಳೆಸುವ ಜೊತೆಗೆ, ಮದುವೆ ಮತ್ತು ಶುಭ ಸಮಾರಂಭಗಳನ್ನು ಸರಳವಾಗಿ ಆಚರಿಸುವ ಮೂಲಕ ಅನಗತ್ಯ ಸಾಲದ ಹೊರೆ ತಪ್ಪಿಸಿಕೊಳ್ಳಬೇಕು ಎಂಬ ಆಶಯವನ್ನು ಸಭೆ ವ್ಯಕ್ತಪಡಿಸಿದೆ.
ಸೊರಬ ತಾಲೂಕಿನಲ್ಲಿ ಆರಂಭಗೊಂಡಿರುವ ಅದ್ಧೂರಿ ಬೀಗರೂಟ ವಿರೋಧಿ ಆಂದೋಲನಕ್ಕೆ ತಾಳಗುಪ್ಪದ ನಿರ್ಧಾರ ಮತ್ತಷ್ಟು ಬಲ ನೀಡಿದೆ. ಈ ಹಿಂದೆ ಚಿಕ್ಕಶಕುನ, ಶೀಗೇಹಳ್ಳಿ, ಕುಂದಗಸವಿ, ಗುಡವಿ, ಶಿಗ್ಗಾ ಅದ್ಧೂರಿ ಬೀಗರೂಟ ನಿಷೇಧದ ನಿರ್ಧಾರ ಕೈಗೊಳ್ಳಲಾಗಿತ್ತು. ನೆರೆಯ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದಲ್ಲಿಯೂ ಈ ಪದ್ಧತಿಗೆ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿದ್ದು, ಸಾಗರ ತಾಲೂಕಿನ ಹುಣಸೂರು ಗ್ರಾಮದಲ್ಲಿಯೂ ಅದ್ಧೂರಿ ಬೀಗರೂಟ ವಿರೋಧಿ ನಿರ್ಧಾರ ಪ್ರಕಟವಾಗಿತ್ತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳು ಈ ನಿರ್ಧಾರಕ್ಕೆ ಕೈಜೋಡಿಸಿ, ಅದ್ಧೂರಿ ಬೀಗರೂಟ ವಿರೋಧಿ ಆಂದೋಲನವನ್ನು ಜನಪರ ಸಾಮಾಜಿಕ ಚಳವಳಿಯಾಗಿ ರೂಪಿಸಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಫೋಟೊ: ಕೆಪಿಸೊರಬ-೦೧