ಮುತ್ತತ್ತಿಯಲ್ಲಿ ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿಷೇಧ

KannadaprabhaNewsNetwork |  
Published : Dec 30, 2023, 01:15 AM IST
28ಕೆಎಂಎನ್ ಡಿ11,12,13,14,15 | Kannada Prabha

ಸಾರಾಂಶ

ಹೊಸ ವರ್ಷಾಚರಣೆಯ ನೆಪದಲ್ಲಿ ವಿಕೃತ ಮೋಜು ಮಸ್ತಿಯಲ್ಲಿ ತೊಡಗುವ ಪ್ರವಾಸಿಗರಿಗೆ ಕಡಿವಾಣ ಹಾಕಲು ಪವಿತ್ರ ಕ್ಷೇತ್ರ ಮುತ್ತಿತ್ತಿ ದೇವಸ್ಥಾನಕ್ಕೆ ನಿಷೇದ ಹೇರಲಾಗಿದೆ.ಈ ಮೂಲಕ ಮುಂಜಾಗೃತ ಕ್ರಮವಾಗಿ ದೇವರ ಸನ್ನಿದಾನದಲ್ಲಿ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ಹೇರಿ ತಾಲೂಕು ದಂಡಾಧಿಕಾರಿ ಆದೇಶಿಸಿದ್ದಾರೆ.

ಹೊಸ ವರ್ಷಾಚರಣೆ ಆಚರಿಸಲು ನಿರ್ಬಂಧ । ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ । ಡಿ.31 ಬೆಳಗ್ಗೆ 6 ರಿಂದ ಜನವರಿ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ

ಕನ್ನಡಪ್ರಭ ವಾರ್ತೆ ಹಲಗೂರು

ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲು ಡಿ.31 ರ ಬೆಳಗ್ಗೆ 6 ಗಂಟೆಯಿಂದ ಜನವರಿ 1 ಸಂಜೆ 6 ಗಂಟೆವರೆಗೆ ಪ್ರವಾಸಿಗರು ಮತ್ತು ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ಹೊಸ ವರ್ಷವನ್ನು ಆಚರಿಸಲು ಬಹುತೇಕ ಪ್ರವಾಸಿಗರು ಮುತ್ತತ್ತಿಗೆ ಆಗಮಿಸುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ತಾಲೂಕು ದಂಡಾಧಿಕಾರಿ ಕೆ.ಎನ್.ಲೋಕೇಶ್ ಆದೇಶದ ಮೇರೆಗೆ ಮುತ್ತತ್ತಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಮುತ್ತತ್ತಿ ಪ್ರವಾಸಿ ತಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಎರಡು ದಿನಗಳ ಕಾಲ ಸಿಆರ್ ಪಿ ಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ತಾಲೂಕು ದಂಡಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ತಾಳವಾಡಿ ಚೆಕ್ ಪೋಸ್ಟ್ ಬಳಿ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯ ಸೇರಿ ರಾಜ್ಯಾದ್ಯಂತ ಹಲವು ಜಿಲ್ಲೆಗಳ ಪ್ರವಾಸಿಗರಿಗೆ ಮುತ್ತತ್ತಿ ಅಚ್ಚುಮೆಚ್ಚಿನ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳವಾಗಿದೆ. ವರ್ಷವಿಡೀ ರಜಾ ದಿನಗಳು, ವಿಕೇಂಡ್ ನಲ್ಲಿ ಪ್ರವಾಸಿಗರು ಆಗಮಿಸುವುದು ಸಾಮಾನ್ಯವಾಗಿದೆ.

2024ರ ಹೊಸ ವರ್ಷಾಚರಣೆ ಹಿನ್ನೆಲೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮುತ್ತತ್ತಿಗೆ ಭೇಟಿ ನೀಡುವುದು ಸಾಮಾನ್ಯ. ವರ್ಷಾಚರಣೆ ವೇಳೆ ನದಿ ಅಂಚಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ನಿಷೇಧಾಜ್ಞೆ ಜಾರಿ ಅನಿವಾರ್ಯವಾಗಿದೆ ಎಂದು ಪೊಲೀಸರು, ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ರಜಾ ದಿನಗಳು ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುತ್ತತ್ತಿಗೆ ಬರುತ್ತಾರೆ. ಈ ವೇಳೆ ಸೌಂದರ್ಯದ ಸೊಬಗನ್ನು ಸವಿದು ದೇವರ ದರ್ಶನ ಪಡೆದು ಹೋಗುವ ಬದಲಿಗೆ ಮೋಜು, ಮಸ್ತಿ ಹಾಗೂ ಮದ್ಯಪಾನ ಮಾಡಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ತಾಲೂಕು ಆಡಳಿತ ಈ ಕ್ರಮ ಕೈಗೊಂಡಿದೆ.

ಕಾವೇರಿ ನದಿ ದಡದಲ್ಲಿ ಅಪಾಯದ ಸೂಚನಾ ಫಲಕವನ್ನು ಪೊಲೀಸರು ಹಾಕಿದ್ದಾರೆ. ಆದರೂ ಪ್ರವಾಸಿಗರು, ಭಕ್ತರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನದಿಯಲ್ಲಿ ಈಜಲು ಹೋಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅಪರಾಧ ಮತ್ತು ಅಪಘಾತ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿವೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಹಲಗೂರು ಸಮೀಪದ ಗಾಣಾಳು ಗ್ರಾಮದ ಬಳಿ ಇರುವ ಗಾಣಾಳು ಫಾಲ್ಸ್ (ಬೆಂಕಿ ಹಳ್ಳ) ಸೌಂದರ್ಯದ ಸೊಬಗಿನಿಂದ ತುಂಬಿದೆ. ಗಗನಚುಕ್ಕಿ, ಭರಚುಕ್ಕಿ, ಮುತ್ತತ್ತಿ, ಬಸವನ ಬೆಟ್ಟ,ಅಂತರಹಳ್ಳಿ ಬೆಟ್ಟ ಸೇರಿದಂತೆ ಚಿಲ್ಲಾಪುರದ ಪವಾಡ ಪುರುಷ ಸಿದ್ದಪ್ಪಾಜಿ ದೇವಸ್ಥಾನಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ.

ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದ ಮುತ್ತತ್ತಿಯಲ್ಲಿ ಭಾನುವಾರ ಮತ್ತು ಸೋಮವಾರ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಎರಡು ದಿನಗಳ ಕಾಲ ಪ್ರವಾಸಿಗರು ಹೋಗುವ ಪ್ರಯತ್ನ ಮಾಡಬೇಡಿ. ತಾಲೂಕು ಆಡಳಿತ ಆದೇಶವನ್ನು ಪಾಲಿಸಿ.

-ಪಿ.ಎಂ.ನರೇಂದ್ರಸ್ವಾಮಿ, ಶಾಸಕರು,

ವರ್ಷಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಪ್ರವಾಸಿಗರಿಗೆ ನಿಷೇಧ ಹೇರಿರುವುದು ಶ್ಲಾಘನೀಯ. ಆದರೆ, ಜನವರಿ 1ರಂದು ಮುತ್ತತ್ತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಆಶಯ.

-ರವಿ, ಬ್ಯಾಡರಹಳ್ಳಿ ಗ್ರಾಪಂ ಸದಸ್ಯರು.

ಗಾಣಾಳು ಗ್ರಾಮದ ಫಾಲ್ಸ್ (ಬೆಂಕಿ ಫಾಲ್ಸ್) ಎಂದೆ ಹೆಸರಾಗಿರುವ ಈ ಸ್ಥಳವನ್ನು ಪ್ರವಾಸಿಗರು ದುಶ್ಚಟಗಳಿಗೆ ಬಳಸಿಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆಯವರು ಈ ಕೇಂದ್ರವನ್ನು ಪ್ರವಾಸಿ ತಾಣವಾಗಿ ಮಾಡಿ ಪ್ರಕೃತಿ ಸೌಂದರ್ಯವನ್ನು ಕಾಪಾಡಬೇಕು. ಈ ಬಗ್ಗೆ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ.

-ಚಂದ್ರಕುಮಾರ್ , ಜಿಪಂ ಮಾಜಿ ಸದಸ್ಯರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ