ಪ್ರವಾಸಿ ತಾಣಗಳಲ್ಲಿ ರಾತ್ರಿ ನ್ಯೂಯರ್‌ ಆಚರಣೆಗೆ ತಡೆ: ಎಸ್‌ಪಿ ಡಾ. ವಿಕ್ರಂ ಅಮಟೆ

KannadaprabhaNewsNetwork | Published : Dec 31, 2024 1:02 AM

ಸಾರಾಂಶ

ಚಿಕ್ಕಮಗಳೂರುಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ತಡೆ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಿಗ್ಗೆ 6 ಗಂಟೆವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

-ಜಿಲ್ಲೆಯಲ್ಲಿ ರೇವ್ ಪಾರ್ಟಿಗಳನ್ನು ನಿಷೇಧ ।ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಧ್ವನಿ ವರ್ಧಕ, ಪಟಾಕಿಗಳನ್ನು ಸಿಡಿಸಬಾರದುಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ತಡೆ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಿಗ್ಗೆ 6 ಗಂಟೆವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಜಿಲ್ಲೆಯಲ್ಲಿ ರೇವ್ ಪಾರ್ಟಿಗಳನ್ನು ನಿಷೇಧಿಸಲಾಗಿದ್ದು ಒಂದು ವೇಳೆ ಇಂತಹ ಪಾರ್ಟಿಗಳನ್ನು ನಡೆಸಿದರೆ ಆಯೋಜಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ರಾತ್ರಿ 10 ಗಂಟೆ ನಂತರ ಔಟ್ ಡೋರ್ ಡಿಜೆಗಳಿಗೆ ನಿಷೇಧ ಹೇರಲಾಗಿದೆ. ಹೊಸ ವರ್ಷದ ಆಚರಣೆಗೆಂದು ಈ ಬಾರಿ ನೂತನವಾಗಿ ಪರಿಚಯಿಸಿರುವ ತಾತ್ಕಾಲಿಕ ಸಿಎಲ್- 5 ಲೈಸೆನ್ಸ್ ಪಡೆದವರು ಪೊಲೀಸ್ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ ಎಂದರು.

ಮಂಗಳವಾರ ಸಂಜೆ ನಂತರ ಪೊಲೀಸರು ರಸ್ತೆಗಳಲ್ಲಿ ಜಿಗ್ ಜಾಗ್ ರೀತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಮದ್ಯಪಾನ ಮಾಡಿ ವೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣೀಡಲಿದ್ದಾರೆ ಎಂದು ಹೇಳಿದ ಅವರು, ಡ್ರಂಕ್ ಆ್ಯಂಡ್‌ ಡ್ರೈವ್ ಮಾಡುವವರ ವಿರುದ್ಧ ಕೇಸ್ ದಾಖಲಿಸ ಲಾಗುವುದು ಎಂದು ಹೇಳಿದರು.

ಹೊಸ ವರ್ಷಾಚರಣೆ ಸಂಬಂಧ ಹೋಂ ಸ್ಟೇ, ರೇಸಾರ್ಟ್‌, ವೈನ್ಸ್‌ ಸ್ಟೋರ್‌ಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ವಯಂ ಸೇವಕರು ಅಥವಾ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ವಿದೇಶಿಗರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಖಾಳಜಿ ವಹಿಸುವಂತೆ ಸಂಬಂಧಿತ ಮಾಲೀಕರಿಗೆ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದರು.

ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ಹಾಗೂ ಸ್ವಾಗತ ಕಾರರ ಕೊಠಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ರೆಸಾರ್ಟ್, ಹೋಂ ಸ್ಟೇ ಗಳಲ್ಲಿ ಹೊಸ ವರ್ಷಾಚರಣೆ ಸಂಬಂಧ ಕಾರ್ಯಕ್ರಮ ಆಯೋಜಿಸುವಾಗ ಧ್ವನಿವರ್ಧಕದ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳತಕ್ಕದ್ದು ಹಾಗೂ ನೆರೆಹೊರೆಯವರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕ ಬಳಸದಂತೆ ಹಾಗೂ ಮಾಲಿನ್ಯ ಕಾರಕ ಪಟಾಕಿಗಳನ್ನು ಸಿಡಿಸದಂತೆ ಸೂಚಿಸಲಾಯಿತು. ಹೋಂ ಸ್ಟೇ ರೆಸಾರ್ಟ್ ಮಾಲೀಕರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಆಗಮಿಸುವ ಅತಿಥಿಗಳಿಗೆ ಸೂಕ್ತವಾದ ರಸ್ತೆ ಮತ್ತು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಯಿತು. ರಾತ್ರಿ 12.30ರ ನಂತರ ಆಚರಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.---- ಬಾಕ್ಸ್‌ ----ಹೊಸ ವರ್ಷಾಚರಣೆ: ಕೆಲವೆಡೆ ನಿರ್ಬಂಧಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಝರಿ ಫಾಲ್ಸ್‌, ಹೊನ್ನಮ್ಮನಹಳ್ಳ, ಗಾಳಿ ಕೆರೆ, ಹಿರೇಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ಬಲ್ಲಾಳರಾಯನ ದುರ್ಗಾ, ರಾಣಿ ಝರಿ, ಬಂಡಾಜೆ ಫಾಲ್ಸ್‌, ಕುಡಿಗೆ ಫಾಲ್ಸ್‌, ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ ಮತ್ತು ಅಬ್ಬುಗುಡಿಗೆ ಫಾಲ್ಸ್‌, ಐಯ್ಯನಕೆರೆ, ಮದಗದಕೆರೆ, ಕೆಮ್ಮಣ್ಣಗುಂಡಿ, ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್‌ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಡಿ. 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರಿಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

--

30 ಕೆಸಿಕೆಎಂ 4

Share this article