ಸಂಪತ್ ತರೀಕೆರೆ
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪ್ರೀ, ಪೋಸ್ಟ್ ವೆಡ್ಡಿಂಗ್ ಶೂಟ್ಸ್, ಬೇಬಿ, ಮಾಡೆಲಿಂಗ್ ಶೂಟ್ಸ್, ರೀಲ್ಸ್-ವೀಡಿಯೋ, ಸಿನಿಮಾ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಕಬ್ಬನ್ ಉದ್ಯಾನದಲ್ಲಿ ರೀಲ್ಸ್, ಸಿನಿಮಾ, ಕಿರುತೆರೆ, ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಸ್ ಸೇರಿದಂತೆ ಇನ್ನಿತರ ಚಿತ್ರೀಕರಣಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಬೆನ್ನಲ್ಲೇ ಸಸ್ಯಕಾಶಿ ಲಾಲ್‌ಬಾಗ್‌ನಲ್ಲೂ ಚಿತ್ರೀಕರಣಕ್ಕೆ ನಿಷೇಧ ಹೇರಲು ಮುಂದಾಗಿರುವ ತೋಟಗಾರಿಕೆ ಕೆಲ ದಿನಗಳಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಲಾಲ್‌ಬಾಗ್ ಸಸ್ಯಶಾಸ್ತ್ರೀಯ ತೋಟ. ಇಲ್ಲಿ ಮರ-ಗಿಡಗಳ ಸಂಪೂರ್ಣ ಸಂರಕ್ಷಣೆಗೆ ಮೊದಲ ಆದ್ಯತೆ. ಇದು ಜೀವವೈವಿಧ್ಯತೆಯ ತಾಣ ಆಗಿರುವುದರಿಂದ ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ವಾಸಿಸಲು ಯಾವುದೇ ರೀತಿಯ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶ ಹೊಂದಲಾಗಿದೆ. ಉದ್ಯಾನವನ ಸರ್ವರೂ ಒಪ್ಪುವಂತಿರಬೇಕು. ಈ ಕಾರಣಕ್ಕಾಗಿ ಚಿತ್ರೀಕರಣ ನಿಷೇಧಕ್ಕೆ ನಿರ್ಧರಿಸಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್ ) ಡಾ.ಎಂ.ಜಗದೀಶ್.
ಚಿತ್ರೀಕರಣ ನಿಷೇಧಕ್ಕೆ ಕಾರಣಗಳೇನು?:
* ಲಾಲ್‌ಬಾಗ್‌ನಲ್ಲಿ ಹೆಜ್ಜೇನುಗಳು ಗೂಡುಗಳನ್ನು ಕಟ್ಟಿಕೊಂಡಿವೆ. ಫೋಟೋ ಅಥವಾ ಸಿನಿಮಾ ಚಿತ್ರೀಕರಣ ಮಾಡುವವರಿಗೆ ದೊಡ್ಡ ಮರಗಳನ್ನು ಕಂಡರೆ ಆಕರ್ಷಣೆ ಜಾಸ್ತಿ. ಚಿತ್ರೀಕರಣ ವೇಳೆ ಫೋಟೋ ಫ್ಲ್ಯಾಶ್ ಲೈಟ್‌ಗಳಿಂದಾಗಿ ಜೇನುಗಳಿಗೆ ಕಿರಿಕಿರಿಯಾದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ.* ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಸ್ ವೇಳೆಯಲ್ಲಿ ಸಾರ್ವಜನಿಕ ಸ್ಥಳ ಎಂಬುದನ್ನು ಮರೆತು ಅಶ್ಲೀಲವಾಗಿ ಇತರರಿಗೆ ಮುಜುಗರ ತರಿಸುವಂತೆ ಫೋಟೋ, ವೀಡಿಯೋಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಉದ್ಯಾನವನಕ್ಕೆ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು, ಪ್ರವಾಸಿಗರು ಬರುತ್ತಿರುತ್ತಾರೆ. ಅಂತವರಿಗೆ ಮುಜುಗರವಾಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ.
* ಮುಖ್ಯವಾಗಿ ಗಿಡ, ಮರಗಳ ಮೇಲೆ ಕುಳಿತು ಫೋಟೋ, ವೀಡಿಯೋ ತೆಗೆಸಿಕೊಳ್ಳುವುದರಿಂದ ಗಿಡ ಮರಗಳಿಗೂ ಹಾನಿಯಾಗುತ್ತದೆ. ಜೊತೆಗೆ ಮರ ಹತ್ತಿ ರೆಂಬೆ ಕೊಂಬೆಗಳು ಮುರಿದು ಬಿದ್ದರೆ ಜೀವ ಹಾನಿಯೂ ಸಂಭವಿಸುವ ಸಾಧ್ಯತೆಯೂ ಇದೆ.