ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಬಣಜಿಗರು!

KannadaprabhaNewsNetwork |  
Published : Jan 26, 2026, 02:15 AM IST
ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಭಾನುವಾರ ತಾಲೂಕು ಬಣಜಿಗ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಲಿಂಗಾಯತ ಮಠಗಳು ಯಾವುದೇ ಜಾತಿ, ಮತ ಎಂಬುದನ್ನು ಕೇಳದೆ ಎಲ್ಲರಿಗೂ ಆಶ್ರಯ ನೀಡಿವೆ. ಆದರೆ, ಇಂದು ನಮ್ಮತನವನ್ನು ನಾವು ಮರೆಯುತ್ತಿದ್ದೇವೆ‌. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ‌.

ಹುಬ್ಬಳ್ಳಿ:

ಹೃದಯವಂತಿಕೆ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಬಣಜಿಗರು. ಆದರೆ, ಇಂತಹ ಸಮಾಜದಲ್ಲಿ ಕೆಲವರು ಬಿರುಕು ಮೂಡಿಸಿ ರಾಜಕಾರಣ ಮಾಡುವ ಷಡ್ಯಂತ ನಡೆಸುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಭಾನುವಾರ ತಾಲೂಕು ಬಣಜಿಗ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಮಾಜ ಮೌನವಾಗಿದೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ‌. ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಮುಂದೆ ತರುವ ಕೆಲಸವನ್ನು ಬಣಜಿಗರು ಮಾಡುತ್ತಿದ್ದಾರೆ. ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸಿ ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳುತ್ತಿರುವರು ಇಂದಿಗೂ ಇದ್ದಾರೆ. ನಮ್ಮ ಸ್ವಾರ್ಥ ನಮ್ಮನ್ನು ಕಿತ್ತು ತಿನ್ನುತ್ತಿದೆ. ನಮ್ಮ ನಮ್ಮವರಿಂದಲೇ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಮಠಗಳು ಯಾವುದೇ ಜಾತಿ, ಮತ ಎಂಬುದನ್ನು ಕೇಳದೆ ಎಲ್ಲರಿಗೂ ಆಶ್ರಯ ನೀಡಿವೆ. ಆದರೆ, ಇಂದು ನಮ್ಮತನವನ್ನು ನಾವು ಮರೆಯುತ್ತಿದ್ದೇವೆ‌. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ‌. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರವನ್ನು ನೀಡಬೇಕಿದೆ. ಒಳಪಂಗಡಗಳನ್ನು ಮರೆತು ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತ ಒಟ್ಟಾಗಿ ದುಡಿಯೋಣ ಎಂದು ಕರೆ ನೀಡಿದರು.

ಬಣಜಿಗರ ಗಣತಿಯಾಗಲಿ:

ಅತಿಥಿಗಳಾಗಿ ಆಗಮಿಸಿದ್ದ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಬಣಜಿಗರು ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ. ಇದೀಗ ಜಾತಿ ಗಣತಿ, ಜನ ಗಣತಿ ನಡೆಯುತ್ತಿದೆ. ಹೀಗಾಗಿ ಸಮಾಜದ ಗಣತಿ ಮಾಡಬೇಕಿದೆ. ಅದರೊಂದಿಗೆ ವೀರಶೈವ ಲಿಂಗಾಯತ ಸಮಾಜಕ್ಕೆ ಶಕ್ತಿ ನೀಡಬೇಕಿದೆ ಎಂದರು.

ವೀರಶೈವ ಲಿಂಗಾಯತರು ಇಂದು ಕವಲು ದಾರಿಯಲ್ಲಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಘಾತ ಕಟ್ಟಿಟ್ಟ ಬುತ್ತಿ. ಕಾಣದ ಕೈಗಳು ಸಂಚು ರೂಪಿಸುತ್ತಿವೆ. ಆಯಕಟ್ಟಿನ ಜಾಗದಲ್ಲಿ ನಮ್ಮವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಸ್ವಾಮೀಜಿಗಳು ಸ್ವಪ್ರತಿಷ್ಠೆ ಕೈಬಿಟ್ಟು ಒಂದಾಗಬೇಕಿದೆ. ಒಡೆದಾಳುವವರ ಕುರಿತು ಸಮಾಜ ಬಾಂಧವರು ಎಚ್ಚರದಿಂದಿರುವಂತೆ ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಗೂ ಸಾನ್ನಿಧ್ಯ ವಹಿಸಿದ್ದ ಬಂಡಿವಾಡ-ಅಣ್ಣಿಗೇರಿ ಗಿರೀಶ ಆಶ್ರಮದ ಎ.ಸಿ. ವಾಲಿ ಮಹಾರಾಜರು, ಸೇರಿದಂತೆ ಹಲವರಿ ಮಾತನಾಡಿದರು. ಬಳಿಕ ಮಕ್ಕಳು ಹಾಗೂ ಮಹಿಳೆಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಈ ವೇಳೆ ವಿಪ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್‌.ವಿ. ಸಂಕನೂರ, ಮಾಜಿ ಶಾಸಕಿ ಸೀಮಾ ಮಸೂತಿ, ಪರಣ್ಣ ಮುನವಳ್ಳಿ, ವೀರಣ್ಣ ಮತ್ತಿಕಟ್ಟಿ, ಗುರುಪಾದಪ್ಪ ಶಿರೂರ, ಚನ್ನವೀರ ಮುಂಗರವಾಡಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡಿಗರಿವರು- 8 ಮಂದಿಗೆ ಪದ್ಮಶ್ರೀ, ಶತಾವಧಾನಿ ಗಣೇಶ್‌ಗೆ ಪದ್ಮಭೂಷಣ
ಅತ್ತೂರು ಬಸಿಲಿಕಾದಲ್ಲಿ ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವ ಆರಂಭ