ರೈತರಿಗೆ ಖಚಿತ ಆದಾಯ ಕೊಡುವ ಬಾಳೆ: ವಿಜ್ಞಾನಿ ಪ್ರೊ. ರಾಮಕೃಷ್ಣ ಹೆಗಡೆ

KannadaprabhaNewsNetwork |  
Published : Nov 29, 2024, 01:01 AM IST
28ಡಿಡಬ್ಲೂಡಿ7ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಸಹಜ ಸಮೃದ್ಧ ಸಂಸ್ಥೆಯು ಆಯೋಜಿಸಿರುವ ಮೂರು ದಿನಗಳ ಬಾಳೆ ಮೇಳ.  | Kannada Prabha

ಸಾರಾಂಶ

ವರ್ಷವಿಡೀ ಇಳುವರಿ ಕೊಡುವ ಬಾಳೆಯನ್ನು ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಬಾಳೆಯನ್ನು ಒಂದರ್ಥದಲ್ಲಿ ಕಲ್ಪತರು ಎಂದೂ ಹೇಳಬಹುದು.

ಧಾರವಾಡ:

ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಿದರೂ ರೈತರಿಗೆ ಖಚಿತ ಆದಾಯ ಕೊಡಬಲ್ಲ ಬಾಳೆಯನ್ನು ಚಿಕ್ಕ ಜಾಗದಲ್ಲಾದರೂ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿವಿ ತೋಟಗಾರಿಕೆ ವಿಭಾಗದ ಹಿರಿಯ ವಿಜ್ಞಾನಿ ಪ್ರೊ. ರಾಮಕೃಷ್ಣ ಹೆಗಡೆ ಸಲಹೆ ನೀಡಿದರು.

ಇಲ್ಲಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಸಹಜ ಸಮೃದ್ಧ ಸಂಸ್ಥೆಯು ಆಯೋಜಿಸಿರುವ ಮೂರು ದಿನಗಳ ಬಾಳೆ ಮೇಳವನ್ನು ಗುರುವಾರ ಉದ್ಘಾಟಿಸಿದ ಅವರು, ವರ್ಷವಿಡೀ ಇಳುವರಿ ಕೊಡುವ ಬಾಳೆಯನ್ನು ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಬಾಳೆಯನ್ನು ಒಂದರ್ಥದಲ್ಲಿ ಕಲ್ಪತರು ಎಂದೂ ಹೇಳಬಹುದು. ಈ ಬೇಸಾಯ ನಂಬಿಕೊಂಡು ಬದುಕು ನಡೆಸುತ್ತಿರುವ ಚಿಕ್ಕ ಕುಟುಂಬಗಳು ಸಾಕಷ್ಟಿವೆ ಎಂದರು.ಸುಸ್ಥಿರ ಅಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್, ಬಾಳೆಯು ಬದುಕಿನಲ್ಲಿ ಹಾಸುಹೊಕ್ಕಾಗಿದೆ. ದೊಡ್ಡ ಜಮೀನು ಇದ್ದವರಷ್ಟೇ ಅಲ್ಲ; ಮನೆಯಂಗಳದಲ್ಲಿ ಕೂಡ ಬಾಳೆ ಬೆಳೆಯಬಹುದು. ಎಲ್ಲರಿಗೂ ಪ್ರಿಯವಾದ ಈ ಹಣ್ಣನ್ನು ಕನ್ನಡ ಭಾಷೆಗೆ ಹೋಲಿಸಿದ ನಿದರ್ಶನವಿದೆ ಎಂದು ಹೇಳಿದರು.

ಮಲೆನಾಡಿಗೂ ಬಾಳೆಗೂ ಇರುವ ನಂಟಿನ ಬಗ್ಗೆ ಪ್ರಸ್ತಾಪಿಸಿದ ಡಾ. ಭಟ್, ಹಬ್ಬ-ಸಮಾರಂಭಗಳಲ್ಲಿ ಮಾತ್ರವಲ್ಲದೇ ದಿನನಿತ್ಯ ಬಳಸುವ ತಿಂಡಿ-ತಿನಿಸುಗಳಲ್ಲೂ ಬಾಳೆ ಬಳಕೆಯಾಗುತ್ತಿದ್ದು ಮೌಲ್ಯವರ್ಧನೆಗೆ ಇನ್ನಷ್ಟು ಅವಕಾಶವಿದೆ ಎಂದರು.

ಗುಂಡೇನಹಟ್ಟಿಯ ಸಾವಯವ ಕೃಷಿಕ ಶಂಕರ ಲಂಗಟಿ, ಅಧಿಕ ಇಳುವರಿಯೊಂದನ್ನೇ ಗಮನದಲ್ಲಿ ಇಟ್ಟುಕೊಂಡು ತಳಿ ಆಯ್ಕೆ ಮಾಡಿಕೊಳ್ಳುವ ಬದಲಿಗೆ, ಅದರಲ್ಲಿನ ಪೋಷಕಾಂಶ ಹಾಗೂ ಕೀಟ-ರೋಗ ನಿರೋಧಕ ತಾಕತ್ತನ್ನು ಗಮನಿಸಿ ದೇಸಿ ತಳಿ ಬೆಳೆಯಲು ರೈತರು ಮುಂದಾಗಬೇಕು ಎಂಬ ಸಲಹೆ ನೀಡಿದರು.

ಕೃಷಿ ವಿವಿ ಹಿರಿಯ ವಿಜ್ಞಾನಿ ಡಾ. ಕೆ.ಜೆ. ಸಣ್ಣ ಪಾಪಮ್ಮ, ಬಾಳೆ ದಿಂಡಿನಿಂದ ಮಾಡುವ ಮೌಲ್ಯವರ್ಧನೆ ಬಗ್ಗೆ, ಬಾಳೆಯ ಸಂರಕ್ಷಕ ಪ್ರಸಾದ್ ರಾಮ್ ಹೆಗಡೆ ಬಾಳೆ ಬೇಸಾಯದ ಕುರಿತು ಮಾಹಿತಿ ನೀಡಿದರು. ಸಾವಯವ ಕೃಷಿಕ ಗದಿಗೆಪ್ಪ ಹೆಬ್ಬಾಳ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಮಾತನಾಡಿದ ಸಹಜ ಸಮೃದ್ಧ ಸಂಸ್ಥೆಯ ಸಂಯೋಜಕ ಸಿ. ಶಾಂತಕುಮಾರ, ಬಾಳೆ ಮೇಳದಲ್ಲಿ 50ಕ್ಕೂ ಹೆಚ್ಚಿನ ವೈವಿಧ್ಯಮಯ ತಳಿಗಳು ಪ್ರದರ್ಶನದಲ್ಲಿವೆ. ಎಂಟು ಅಡಿ ಉದ್ದದ ‘ಸಹಸ್ರ ಬಾಳೆ’ ತರಲಾಗಿದೆ. ಬಾಳೆ ತಳಿಗಳನ್ನು ಸಂರಕ್ಷಿಸಿರುವ ಶಿರಸಿಯ ಪ್ರಸಾದ್ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತಂದಿದ್ದಾರೆ. ಹೆಗ್ಗಾಂಬಿ, ಮಧುರಾಂಗ, ಥಾಯ್ಲೆಂಡ್ ಬಾಳೆ, ಸಣ್ಣ ರಸಬಾಳೆ, ದೊಡ್ಡ ರಸಬಾಳೆ, ಡಬಲ್ ಮೈ, ಭೀಮ್ ಕೋಲು, ಬೇಬಿ ಫಿಂಗರ್, ಚೆಂಗದಳಿ, ಥಾಯ್ಲೆಂಡ್ ಶಾನ್ ಬಾಳೆ, ಸಹಸ್ರ ಬಾಳೆ, ಏಲಕ್ಕಿ ಬಾಳೆ, ಹೂಬಾಳೆ, ವಾಟ್‍ ಬಾಳೆ ಹೀಗೆ ತರಹೇವಾರಿ ಬಾಳೆಹಣ್ಣು ನೋಡಿ ರುಚಿ ಸವಿಯಬಹುದು ಎಂದರು.

ಅಶ್ವಿನಿ ಪ್ರಾರ್ಥಿಸಿದರು. ಅಭಿಷೇಕ್ ಸ್ವಾಗತಿಸಿದರು. ಮಂಜು ಹೆಬ್ಬಳ್ಳಿ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...