- ನವರಾತ್ರಿ ಪೂಜಾ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಪ್ರಸಕ್ತ ಸಾಲಿನ ಉತ್ಸವದ ಕರಪತ್ರ ಬಿಡುಗಡೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ 16ನೇ ವರ್ಷದ ನವರಾತ್ರಿ ಮಹೋತ್ಸವ ಸೆ.22ರಿಂದ ಅ.2ರ ವರೆಗೆ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ ಬರಗಲ್ ತಿಳಿಸಿದರು.ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನವರಾತ್ರಿ ಪೂಜಾ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಪ್ರಸಕ್ತ ಸಾಲಿನ ಉತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬಾಳೆಹೊನ್ನೂರು ನವರಾತ್ರಿ ಮಹೋತ್ಸವ ಈ ವರ್ಷ ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಬಾರಿ ಹನ್ನೊಂದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಎಲ್ಲಾ ದಿನಗಳು ದುರ್ಗಾದೇವಿ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಅಷ್ಟೋತ್ತರ ಕುಂಕುಮಾರ್ಚನೆ, ಶ್ರೀ ದುರ್ಗಾ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ವಿಶೇಷ ದಿನಗಳಂದು ಚಂಡಿಕಾ ಹೋಮ, ಅಕ್ಷರಾಭ್ಯಾಸ, ಹೂವಿನ ಪೂಜೆ, ದುರ್ಗಾ ಹೋಮ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ, ರಾತ್ರಿ ಭವ್ಯವಾದ ಮಂಟಪದಲ್ಲಿ ರಾಜ್ಯದ ವಿವಿಧ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಕಲಾತಂಡಗಳಲ್ಲಿ ಪ್ರಖ್ಯಾತ ಕಲಾವಿದರು ಪಾಲ್ಗೊಂಡು ಕಲಾ ಸೇವೆ ಸಲ್ಲಿಸಲಿದ್ದಾರೆ ಎಂದರು.ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ. ಮಹೇಂದ್ರ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಪ್ರದಾಯಬದ್ಧ, ಶಿಸ್ತು ಹಾಗೂ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಹೆಸರಾದ ನವರಾತ್ರಿ ಉತ್ಸವ ಬಾಳೆಹೊನ್ನೂರು ದಸರಾ ಎಂದೇ ಮನೆ ಮಾತಾಗಿದೆ. ಕಳೆದ ವರ್ಷಗಳಂತೆಯೇ ಈ ವರ್ಷವೂ ಸಹ ವಿಶೇಷ, ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದ 11 ದಿನಗಳ ಕಾಲ ಸರಾಸರಿ 40 ಸಾವಿರಕ್ಕೂ ಅಧಿಕ ಭಕ್ತರು ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ. ಹಿಂದೂ ಸಂಸ್ಕೃತಿ, ಸಂಪ್ರದಾಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ದುರ್ಗಾದೇವಿ ಜಲಸ್ತಂಭನಾ ಶೋಭಾಯಾತ್ರೆಯಲ್ಲಿ ರಾಜ್ಯ, ಹೊರರಾಜ್ಯದ ವಿವಿಧ ಕಲಾತಂಡಗಳು ಸಹ ಭಾಗವಹಿಸಲಿದೆ. ಇದರೊಂದಿಗೆ ಕಳೆದ ಬಾರಿಯಿಂದ ಆರಂಭಗೊಂಡ ಕಾಶಿಯ ಗಂಗಾರತಿ ಮಾದರಿಯಲ್ಲಿ ಪಟ್ಟಣದ ಜೀವನದಿ ಭದ್ರಾನದಿಗೆ ಭದ್ರಾರತಿಯನ್ನು ಸಹ ನೆರವೇರಿಸಲಾಗುವುದು. ಕಾರ್ಯಕ್ರಮ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಡೆಸಲಾಗುವುದು ಎಂದರು.ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಅದೃಷ್ಟ ಬಹುಮಾನ ಕೂಪನ್‌ನ ಸಂಯೋಜಕರಾದ ನಾಗರಾಜ್ ಬರಗಲ್, ಡಿ.ಎನ್.ಸುಧಾಕರ್ ಮತ್ತಿತರರು ಹಾಜರಿದ್ದರು.೨೨ಬಿಹೆಚ್‌ಆರ್ ೨:
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದ 16ನೇ ವರ್ಷದ ನವರಾತ್ರಿ ಉತ್ಸವದ ಕರಪತ್ರವನ್ನು ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ ಬಿಡುಗಡೆಗೊಳಿಸಿದರು. ಬಿ.ಚನ್ನಕೇಶವ, ಆರ್.ಡಿ.ಮಹೇಂದ್ರ, ಭಾಸ್ಕರ್ ವೆನಿಲ್ಲಾ, ವೆಂಕಟೇಶ್, ಕೃಷ್ಣಮೂರ್ತಿ, ಚೈತನ್ಯ ವೆಂಕಿ ಇದ್ದರು.