ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ, ಲಕ್ಷಾಂತರ ರುಪಾಯಿ ಹಾನಿ

KannadaprabhaNewsNetwork | Published : May 11, 2024 12:33 AM

ಸಾರಾಂಶ

ಗುರುವಾರ ತಡರಾತ್ರಿ ಬೀಸಿದ ಬಿರುಗಾಳಿ, ಮಳೆಗೆ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಾದ್ಯಂತ ಬಾಳೆ ಬೆಳೆ ನೆಲಕ್ಕೆ ಉರುಳಿ, ಲಕ್ಷಾಂತರ ರುಪಾಯಿ ಹಾನಿಯಾಗಿದೆ. ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ಬಸವರಡ್ಡಿ ಕರಡ್ಡಿ ಅವರಿಗೆ ಸೇರಿದ ಒಂದೂವರೆ ಎಕರೆ ಏಲಕ್ಕಿ ಬಾಳೆಯ ತೋಟ ಸಂಪೂರ್ಣ ನೆಲಕ್ಕೆ ಉರುಳಿ ಬಿದ್ದಿದ್ದು, ಸಂಪೂರ್ಣ ಹಾನಿಯಾಗಿದೆ.

ಕೊಪ್ಪಳ: ಗುರುವಾರ ತಡರಾತ್ರಿ ಬೀಸಿದ ಬಿರುಗಾಳಿ, ಮಳೆಗೆ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಾದ್ಯಂತ ಬಾಳೆ ಬೆಳೆ ನೆಲಕ್ಕೆ ಉರುಳಿ, ಲಕ್ಷಾಂತರ ರುಪಾಯಿ ಹಾನಿಯಾಗಿದೆ.

ಮಳೆಗಿಂತ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಬೀಸಿದ್ದರಿಂದ ಹಾನಿ ದೊಡ್ಡ ಪ್ರಮಾಣದಲ್ಲಿ ಆಗಿದೆ.

ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ಬಸವರಡ್ಡಿ ಕರಡ್ಡಿ ಅವರಿಗೆ ಸೇರಿದ ಒಂದೂವರೆ ಎಕರೆ ಏಲಕ್ಕಿ ಬಾಳೆಯ ತೋಟ ಸಂಪೂರ್ಣ ನೆಲಕ್ಕೆ ಉರುಳಿ ಬಿದ್ದಿದ್ದು, ಸಂಪೂರ್ಣ ಹಾನಿಯಾಗಿದೆ.

ಕಳೆದ ವಾರದ ಬಿರುಗಾಳಿಗೆ ಶೇ. 25ರಷ್ಟು ಹಾನಿಯಾಗಿತ್ತು. ಆದರೆ, ಈಗ ಪುನಃ ಮತ್ತೆ ಗುರುವಾರ ತಡರಾತ್ರಿ ಸ್ವಲ್ಪ ಪ್ರಮಾಣದ ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದ ಸಂಪೂರ್ಣ ನೆಲಕ್ಕೆ ಬಿದ್ದಿದೆ. ₹8-10 ಲಕ್ಷ ಆದಾಯ ಇನ್ನೊಂದು ತಿಂಗಳಲ್ಲಿ ಕೈಗೆ ಬರುತ್ತಿತ್ತು. ಆದರೆ, ಈಗ ಬಿದ್ದು ಹೋಗಿದ್ದರಿಂದ ನಯಾಪೈಸೆಯೂ ಕೈಗೆ ಬರದಂತೆ ಆಗಿದೆ.ತಡರಾತ್ರಿಯಲ್ಲಿ ಬೀಸಿದ ಬಿರುಗಾಳಿಗೆ ಬಾಳೆ ತೋಟವೆಲ್ಲ ಸಂಪೂರ್ಣ ನಾಶವಾಗಿದೆ. ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ರೈತ ಬಸವರಡ್ಡಿ ಕರಡ್ಡಿ ಹೇಳಿದ್ದಾರೆ.

ಬಾಳೆ ಬೆಳೆ ಹಾನಿ, ಶಾಸಕ ಜನಾರ್ದನ ರೆಡ್ಡಿ ಪರಿಶೀಲನೆ

ಕಳೆದ ಎರಡು ದಿನಗಳ ಹಿಂದೆ ಬಾರಿ ಬಿರುಗಾಳಿಯಿಂದಾಗಿ ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಾಳೆ ಬೆಳೆ ಹಾನಿಯಾಗಿದ್ದು, ಶಾಸಕ ಜನಾರ್ದನ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೆಗೊಂದಿಯ ವಿವಿಧ ಭಾಗದ ರೈತರ ಬೆಳೆದ ಬಾಳೆ ಬೆಳೆ ಹಾನಿಯಾಗಿದ್ದು, ಬತ್ತ, ಬಾಳೆ, ಮಾವಿನ ಗಿಡಗಳ ಬಗ್ಗೆ ಮಾಹಿತಿ ಪಡೆದರು. ಕೂಡಲೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.ಗ್ರಾಪಂ ಸದಸ್ಯರಾದ ಕಾಶೀರಾವ್ ರಾಂಪುರ, ಟಿ.ಜಿ. ಬಾಬು, ಮಲ್ಲಿಕಾರ್ಜುನ ಸ್ವಾಮಿ, ವೀರೇಶ್, ಲಕ್ಷ್ಮಣ್ ನಾಯಕ್, ಮನೋಹರ ಗೌಡ ಹೇರೂರು, ಯಮನೂರ್ ಚೌಡ್ಕಿ, ಕೃಷ್ಣ ಪಟೇಲ್, ಸ್ವಾಮಿ, ಮಂಜುನಾಥ ಕಲಾಲ್, ವಿಶ್ವನಾಥ್ ಮಾಲಿಪಾಟೀಲ್, ದೇವರಾಜ್ ನಾಯಕ್, ರಮೇಶ್ ವಕೀಲರು, ಪರಶುರಾಮ ನಾಯಕ್, ನಾಗರಾಜ ಮಡಿವಾಳ್ ಹಾಗೂ ಅನೇಕರು ಉಪಸ್ಥಿತರಿದ್ದರು.

Share this article