ಗಾಳಿ-ಮಳೆಗೆ ಗೊನೆ ಸಹಿತ ಬಾಳೆ ಧರೆಗೆ: ವಿದ್ಯುತ್‌ ಕಂಬಗಳು ನೆಲಕ್ಕೆ

KannadaprabhaNewsNetwork |  
Published : May 13, 2026, 01:30 AM IST
ಇನಾಂಯಲ್ಲಾಪುರ ಗ್ರಾಮದಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬ | Kannada Prabha

ಸಾರಾಂಶ

ಭಾರೀ ಗಾಳಿ, ಮಳೆಗೆ ಹಾನಗಲ್ಲ ತಾಲೂಕಿನಲ್ಲಿ ೧೭ ಎಕರೆ ಗೊನೆಗೆ ಬಂದ ಬಾಳೆ ನೆಲಸಮವಾಗಿದ್ದು, ಪರಿಹಾರಕ್ಕಾಗಿ ರೈತರು ತೋಟಗಾರಿಕೆ ಇಲಾಖೆ ಮೊರೆ ಹೋಗಿದ್ದಾರೆ.

ಹಾನಗಲ್ಲ: ಭಾರೀ ಗಾಳಿ, ಮಳೆಗೆ ಹಾನಗಲ್ಲ ತಾಲೂಕಿನಲ್ಲಿ ೧೭ ಎಕರೆ ಗೊನೆಗೆ ಬಂದ ಬಾಳೆ ನೆಲಸಮವಾಗಿದ್ದು, ಪರಿಹಾರಕ್ಕಾಗಿ ರೈತರು ತೋಟಗಾರಿಕೆ ಇಲಾಖೆ ಮೊರೆ ಹೋಗಿದ್ದಾರೆ.ಸೋಮವಾರ ಸಂಜೆ ಬಿದ್ದ ಭಾರೀ ಮಳೆ-ಗಾಳಿಗೆ ಇನಾಂಯಲ್ಲಾಪುರದ ವಿರುಪಾಕ್ಷಪ್ಪ ಕರಬಸಪ್ಪನವರ ಅವರ ಕೃಷಿ ಭೂಮಿಯಲ್ಲಿನ ೨ ಎಕರೆ ಕ್ಷೇತ್ರದಲ್ಲಿನ ೨೫೦ಕ್ಕೂ ಅಧಿಕ ಫಲಕ್ಕೆ ಬಂದ ಬಾಳೆ ನೆಲಸಮವಾಗಿದೆ. ಇದೇ ಊರಿನ ಅಡಿವೆಪ್ಪ ಪೂಜಾರ ಎಂಬುವವರ ತೋಟದಲ್ಲಿನ ಬಾಳೆ ಕೂಡ ನೆಲಸಮವಾಗಿದೆ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ತೋಟಗಾರಿಕೆ ಇಲಾಖೆಯನ್ನು ರೈತರು ಒತ್ತಾಯಿಸಿದ್ದಾರೆ. ಮೂಡೂರು ಡೊಳ್ಳೇಶ್ವರ, ಅಜಗುಂಡಿಕೊಪ್ಪ, ಶೇಷಗಿರಿ ಗ್ರಾಮಗಳಲ್ಲಿ ೧೭ ಎಕರೆಯಲ್ಲಿ ಶೇ.೪೦ಕ್ಕೂ ಅಧಿಕ ಬಾಳೆ ಗೊನೆ ಹಾಳಾಗಿದೆ. ರೈತರು ಆತಂಕದಲ್ಲಿದ್ದಾರೆ. ತೋಟಗಾರಿಕೆ ಇಲಾಖೆ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಹಾಳಾದ ಬಾಳೆಗೆ ಸರಿಯಾದ ಬೆಲೆ ಬರುವಷ್ಟು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಪರಿಹಾರ: ಹಾನಗಲ್ಲ ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಇಂದೇ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದೆ. ಹಾನಿಗೊಳಗಾದ ರೈತರ ಕೃಷಿ ಭೂಮಿಗೆ ಭೇಟಿ ನೀಡಿ ವಾಸ್ತವ ವರದಿಯನ್ನು ತಯಾರಿಸಲಾಗುತ್ತಿದೆ. ಕೂಡಲೇ ವರದಿ ತಯಾರಿಸಿ ಹಾನಿಯ ಪರಿಹಾರಕ್ಕೆ ಮೇಲಧಿಕಾರಿಗಳಿಗೆ ಕಳಿಸಿಕೊಡಲಾಗುವುದು. ಬಾಳೆ ಹೊರತುಪಡಿಸಿ ಯಾವುದೇ ಬೆಳೆ ಹಾನಿಯಾಗಿಲ್ಲ ಎಂದು ತಿಳಿಸಿದರು.

ವಿದ್ಯುತ್ ಕಂಬ: ಇನಾಂಯಲ್ಲಾಪುರ ಗ್ರಾಮದಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಕೂಡ ನೆಲಕ್ಕೆ ಬಿದ್ದಿವೆ. ತಾಲೂಕಿನಲ್ಲಿ ಒಟ್ಟು ೩೬ಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿ ಮಳೆಗೆ ನೆಲಕ್ಕುರುಳಿದ ವರದಿಯಾಗಿದೆ. ಕೂಡಲೇ ಹೆಸ್ಕಾಂ ಎಲ್ಲ ಬಿದ್ದ ಕಂಬಗಳನ್ನು ಸರಿಪಡಿಸಲು ಮುಂದಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೆಸ್ಕಾಂ ಸಹಾಯಕ ನಿರ್ದೇಶಕ ವಿ.ಎಸ್. ಮರಿಗೌಡರ ಕನ್ನಡಪ್ರಭಕ್ಕೆ ತಿಳಿಸಿದರು.

ಗಾಳಿಯೇ ಹೆಚ್ಚು: ಕಳೆದ ಒಂದು ವಾರದಲ್ಲಿ ತಾಲೂಕಿನ ಅಲ್ಲಲ್ಲಿ ಮಳೆ ಬೀಳುತ್ತಿದ್ದು, ಮಳೆಗಿಂತ ಗಾಳಿಯ ರಭಸವೇ ಹೆಚ್ಚಾಗಿದೆ. ಮಧ್ಯಾಹ್ನದ ಉರಿಬಿಸಿಲಿಗೆ ಜನರು ಮನೆಯಿಂದ ಹೊರಬರಲಾರದಷ್ಟು ಉಷ್ಣಾಂಶ ಹೆಚ್ಚಿದೆ. ಸಂಜೆ ಹಾಗೂ ಬೆಳಗ್ಗೆ ಮೋಡ ಕವಿದ ವಾತಾವರಣ ಕಾಣಿಸುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಡಿಗೆ ಕಟ್ಟಡದಲ್ಲಿ 203 ಅಂಗನವಾಡಿಗಳು
ವಾಟ್ಸಾಪ್ ಮೂಲಕ ಮಾವಿನ ಹಣ್ಣು ವ್ಯಾಪಾರ